ಹಣ ಕೊಡದಿದ್ದಕ್ಕೆ ತಂದೆಯ ಹತ್ಯೆ

nelamnagala murder
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಹಣ ಕೊಡುವಂತೆ ಪೀಡಿಸುತ್ತಿದ್ದ ಮಗನೊಬ್ಬ, ಆಕ್ರೋಶಗೊಂಡು ತಂದೆಯನ್ನೇ ಹತ್ಯೆ ಮಾಡಿರುವುದು ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು ತಾಲೂಕಿನ ವಡ್ಡರಹಳ್ಳಿ ನಿವಾಸಿ ಕೃಷ್ಣಮೂರ್ತಿ (62) ಕೊಲೆಯಾಗಿದ್ದು, ಆರೋಪಿ ಅರ್ಜುನ್(32)ನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಎಂಟಿಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣಮೂರ್ತಿ 2 ವರ್ಷದ ಹಿಂದೆ ನಿವೃತ್ತಿಯಾಗಿದ್ದರು. ನಿವೃತ್ತಿ ಹಣದಿಂದ ಜೀವನೋಪಾಯಕ್ಕಾಗಿ ಆಟೋ ಚಾಲಕರಾಗಿ ದುಡಿಯುತ್ತಿದ್ದರು. ಪುತ್ರ ಅರ್ಜುನ್ ಕೇರಳದ ಖಾಸಗಿ ಕಂಪನಿಯೊಂದಲ್ಲಿ ಇಂಜಿನಿಯರ್ ಆಗಿದ್ದ. 8 ತಿಂಗಳಿಂದ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ಇದ್ದ. ಜು.15ರಂದು ಹಣದ ವಿಚಾರವಾಗಿ ತಂದೆ-ಮಗನ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಆಕ್ರೋಶಗೊಂಡ ಅರ್ಜುನ್ ತಂದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಕೃಷ್ಣಮೂರ್ತಿಯನ್ನು ಮಾದನಾಯಕನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮನೆ ಕಟ್ಟಲು ಹಣ ಪಡೆದಿದ್ದ:
ಕೃಷ್ಣಮೂರ್ತಿ ನಿವೃತ್ತಿ ನಂತರ ವಡ್ಡರಹಳ್ಳಿಯಲ್ಲಿ 2022ರಲ್ಲಿ ಮನೆ ನಿರ್ಮಾಣ ಮಾಡಿದ್ದು, ಈ ವೇಳೆ ಮಗನಿಂದ 15ಲಕ್ಷ ರೂ. ಪಡೆದಿದ್ದರು ಎನ್ನಲಾಗಿದೆ. ಹಣ ಹಿಂತಿರುಗಿಸುವಂತೆ ನಾಲ್ಕೈದು ತಿಂಗಳಿಂದಲೂ ತಂದೆಯೊಂದಿಗೆ ಮಗ ಜಗಳ ಮಾಡುತ್ತಿದ್ದ. ಇತ್ತೀಚೆಗೆ ಮನೆ ಬಳಿ ಇದ್ದ ಅಂಗಡಿಯನ್ನು ಬಾಡಿಗೆ ನೀಡಿದ್ದು, ಅಂಗಡಿಯವರು ನೀಡಿದ್ದ ಮುಂಗಡ ಹಣ ಕೊಡುವಂತೆ ತಂದೆಗೆ ದುಂಬಾಲು ಬಿದ್ದಿದ್ದ. ಇದೇ ವಿಷಯವಾಗಿ ಅಪ್ಪ-ಮಗನ ನಡುವೆ ಜಗಳವಾಗಿ ವಿಕೋಪಕ್ಕೆ ತಿರುಗಿ ಕೊಲೆಗೆ ಕಾರಣವಾಗಿದೆ.
ಕೃಷ್ಣಮೂರ್ತಿ ಪುತ್ರಿ ಪ್ರತಿಭಾ ಅವರು ನೀಡಿದ ದೂರು ದಾಖಲಿಸಿಕೊಂಡ ಮಾದನಾಯಕನಹಳ್ಳಿ ಠಾಣೆ ವೃತ್ತ ನಿರೀಕ್ಷಕ ಬಿ.ಎಸ್.ಮಂಜುನಾಥ್ ನೇತೃತ್ವದ ತಂಡ ವಡ್ಡರಹಳ್ಳಿಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net