ಬಸವಣ್ಣನ ತತ್ವ ಅನುಸರಿಸಿದರೆ ಸಮಾಜದಲ್ಲಿ ಮನ್ನಣೆ

nelamangala program
Published on

ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಯ್ಯ ಅನಿಸಿಕೆ

ನೆಲಮಂಗಲದಲ್ಲಿ ಸಾಧಕ ಶಿಕ್ಷಕರಿಗೆ ಸನ್ಮಾನ


ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಕ್ರಾಂತಿಕಾರಿ ಬಸವಣ್ಣ ಅವರ ಕಾಯಕತತ್ವ ಮೈಗ್ಗೂಡಿಸಿಕೊಂಡರೆ ಶಿಕ್ಷಕರು ಸಮಾಜದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ತಿಮ್ಮಯ್ಯ ಹೇಳಿದರು.
ಇತ್ತೀಚೆಗೆ ರಾಜ್ಯ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಗೌರವ ಡಾಕ್ಟರೇಟ್ ಪಡೆದ ಶಿಕ್ಷಕರಿಗೆ ನಗರದ ಗುರುಭವನದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಕರೇ ಸುಪ್ರೀಂ ಆಗಿರುತ್ತಾರೆ. ಪ್ರತಿಯೊಬ್ಬ ಶಿಕ್ಷಕನು ಮಾಡುವ ಕೆಲಸ, ಸೇವೆಯನ್ನು ನಿಷ್ಟೆ ಮತ್ತು ಪ್ರಾಮಾಣಿಕವಾಗಿ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಟಿ.ವಾಸುದೇವಮೂರ್ತಿ ಮಾತನಾಡಿ, ದೇಶದ ಬೆಳವಣಿಗೆಗೆ ಶಿಕ್ಷಕರ ಪಾತ್ರ ಮಹತ್ವವಾಗಿದೆ. ಈ ದಿಸೆಯಲ್ಲಿ ಶಾಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ರಾಜ್ಯ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಗೌರವ ಡಾಕ್ಟರೇಟ್ ಪದವಿ ಪಡೆದಿರುವುದು ಹೆಮ್ಮೆ ಎಂದರು.
ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸುಜಾತಾ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ಕೈಲಾದ ಸೇವೆಯನ್ನು ಮಾಡಿದ್ದನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿ ನೀಡಿದ್ದು ಸಂತಸ ತಂದಿದೆ. ಪ್ರಶಸ್ತಿ ಮತ್ತಷ್ಟು ಜವಬ್ದಾರಿ ಹೆಚ್ಚಿಸಿದೆ ಎಂದರು.
ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿವಗಂಗೆ ಶಾಲೆ ಶಿಕ್ಷಕಿ ಸುಜಾತಾ, ಜಿಲ್ಲಾಮಟ್ಟದ ಪ್ರಶಸ್ತಿ ಪಡೆದ ನಗರದ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಹಶಿಕ್ಷಕ ಬಿ.ಆರ್.ಲೋಕೇಶ್, ತಾಲೂಕಿನ ವೀರರಾಘವನಪಾಳ್ಯ ಸ.ಹಿ.ಪ್ರಾ.ಶಾಲೆ ಸಹಶಿಕ್ಷಕಿ ಸರೋಜಮ್ಮ, ಶಿವಾನಂದನಗರ ಸ.ಕಿ.ಪ್ರಾ.ಶಾಲೆ ಸಹಶಿಕ್ಷಕಿ ಕೆ.ಆರ್.ಕೋಮಲಾ ಹಾಗೂ ಭಾರತ್ ವರ್ಚುವಲ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪಡೆದ ಭೂಸಂದ್ರ ಶಾಲೆ ಶಿಕ್ಷಕ ಸದಾನಂದಾರಾಧ್ಯ, ಗೋವಿಂದಪುರ ಶಾಲೆ ಶಿಕ್ಷಕಿ ಶೈಲಜಾ ಅವರನ್ನು ಸನ್ಮಾನಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಗೋಪಾಲಗೌಡ, ಸಹಕಾರ್ಯದರ್ಶಿ ಶೋಭಾ, ನಿರ್ದೇಶಕಿ ವಿಜಯಕುಮಾರಿ, ಸದಸ್ಯೆ ಆಶಾಲತಾ, ವಿದ್ಯಾ ಇಲಾಖೆ ನೌಕರರ ಸಂಘದ ಅಧ್ಯಕ್ಷ ದೇವರಾಜು, ನಿರ್ದೇಶಕ ಕೆ.ಬಿ.ಚಂದ್ರಶೇಖರ್, ಎನ್.ವಿ.ಸಿದ್ದಗಂಗಯ್ಯ, ಮುಖ್ಯಶಿಕ್ಷಕ ಹೊನ್ನಹನುಮಯ್ಯ, ಶಿಕ್ಷಕ ಶಿವಕುಮಾರ್, ಮಂಜುನಾಥ್, ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net