

ನೆಲಮಂಗಲ: ಕಳೆದೆರಡು ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಕೆರೆ-ಕಟ್ಟೆ, ಕಾಲುವೆಗಳು ತುಂಬಿ ಹರಿಯುತ್ತಿವೆ.
ಸೆಪ್ಟೆಂಬರ್‌ನಲ್ಲಿ ಆಗಬೇಕಿದ್ದ 550 ಮಿ.ಮೀಟರ್ ವಾಡಿಕೆ ಮಳೆಗಿಂತ 100 ಮಿ.ಮೀಟರ್ ಅಧಿಕ ಮಳೆಯಾಗಿದೆ. ತಾಲೂಕಿನಾದ್ಯಂತ ಶೇ.94 ಬಿತ್ತನೆಯಾಗಿದ್ದು, ಮುಸುಕಿನ ಜೋಳ, ರಾಗಿ, ನೆಲಗಡಲೆ ಬೆಳೆವ ರೈತರಲ್ಲಿ ಸಂತಸ ಮನೆ ಮಾಡಿದೆ. ಕಳೆದ ಬಾರಿ ತಾಲೂಕಿನಾದ್ಯಂತ 15 ಸಾವಿರ ಹೆಕ್ಟೇರ್ ಕೃಷಿಭೂಮಿಯಲ್ಲಿ ಶೇ.85 ಮಾತ್ರ ಬಿತ್ತನೆಯಾಗಿತ್ತು. ಆದರೆ ಈ ಬಾರಿ ನಗರ ತೊರೆದು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿರುವ ಜನ, ಹೊಲಗಳಲ್ಲಿದ್ದ ನೀಲಗಿರಿ ತೆರವುಗೊಳಿಸಿ ರಾಗಿ, ಮುಸುಕಿನ ಜೋಳ ಬಿತ್ತನೆ ಮಾಡಿದ್ದು, ಕೃಷಿಭೂಮಿ ಪ್ರಮಾಣ ಹೆಚ್ಚಾಗಿದೆ.
ತುಂಬಿ ಹರಿದ ಕೆರೆ, ಕಾಲುವೆಗಳು: ನಗರ, ನಗರಸಭೆ ವ್ಯಾಪ್ತಿಯ ಭಿನ್ನಮಂಗಲ ಹಾಗೂ ತಾಲೂಕಿನ ಬಾವಿಕೆರೆ, ಚಿಕ್ಕಮಾರನಹಳ್ಳಿ, ಶ್ರೀನಿವಾಸಪುರ ಕೆರೆಗಳಿಗೆ ಸ್ಪಲ್ಪ ಪ್ರಮಾಣದ ನೀರು ಹರಿದು ಬಂದಿದೆ. ಮಹದೇವಪುರ ಬಳಿಯ ಕುಮುದ್ವತಿ ನದಿ ಕಾಲುವೆ, ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಮಾಕಳಿ ಬಳಿಯ ಅರ್ಕಾವತಿ ನದಿ ಕಾಲುವೆಯಲ್ಲಿ ನೀರು ಹರಿಯಲಾರಂಭಿಸಿದೆ.
ರಸ ಗೊಬ್ಬರದ ಕೊರತೆ: ಕೃಷಿ ಇಲಾಖೆಯಿಂದ ಅಗತ್ಯವಿರುವ ಸಾವಯವ ಗೊಬ್ಬರ ಹಾಗೂ ಲಘುಪೋಷಕಾಂಶ ವಿತರಣೆ ಮಾಡಲಾಗುತ್ತಿದೆ. ಆದರೆ ರಸಗೊಬ್ಬರ ಯೂರಿಯಾದ ಕೊರತೆ ಎದುರಾಗಿದೆ. ತಾಲೂಕಿನ ಎಲ್ಲ ರೈತರಿಗೆ ತಲಾ 2 ಮೂಟೆ ಮಾತ್ರ ವಿತರಣೆ ಮಾಡಲಾಗುತ್ತಿದೆ. ಮುಸುಕಿನ ಜೋಳಕ್ಕೆ ಇದ್ದ ಹುಳು ಕಾಟ ತಪ್ಪಿಸಲು ಅಗತ್ಯ ಕೀಟನಾಶಕಗಳ ಪೂರೈಕೆ ಮಾಡಲಾಗಿದೆ. ಮುಂದಿನ ಕೆಲ ತಿಂಗಳು ನಿರೀಕ್ಷಿತ ಮಳೆಯಾದಲ್ಲಿ ಉತ್ತಮ ಇಳುವರಿ ನಿರೀಕ್ಷಿಸಬಹುದಾಗಿದೆ ಎಂದು ತಾಲೂಕು ಸಹಾಯಕ ಕೃಷಿ ಅಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.