ಶಾಸಕರಿಂದ ದ್ವೇಷ ರಾಜಕಾರಣ

nelamangala jds wishes
Published on

ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಟಿ.ತಿಮ್ಮರಾಯಪ್ಪ ಆರೋಪ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ಸುಳ್ಳು ಕೇಸು ಹಾಕಿಸುವ ಮೂಲಕ ನೂತನ ಶಾಸಕರು ದ್ವೇಷ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಟಿ.ತಿಮ್ಮರಾಯಪ್ಪ ಆರೋಪಿಸಿದರು.
ತಾಲೂಕಿನ ಹಂಚೀಪುರದ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಗೃಹಕಚೇರಿ ಬಳಿ ಜೆಡಿಎಸ್‌ನಿಂದ ಆಯೋಜಿಸಿದ್ದ ನೂತನವಾಗಿ ಆಯ್ಕೆಯಾದ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷೇತ್ರದಲ್ಲಿ ಜೆಡಿಎಸ್ ಸೋತಿದಿಯೇ ಹೊರತು ಸತ್ತಿಲ್ಲ. ಪಕ್ಷದ ಕಾರ್ಯಕರ್ತರು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನಿಶ್ಚಿತ. ಗ್ರಾಪಂನ ಎರಡನೇ ಅವಧಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸುತ್ತಿರುವುದು ಪಕ್ಷದ ಬಲವರ್ದನೆಗೆ ಸಹಕಾರಿಯಾಗಲಿದೆ. ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸುವ ಮೂಲಕ ನೂತನ ಶಾಸಕರಿಗೆ ತಕ್ಕ ಉತ್ತರ ಕೊಡಬೇಕು ಎಂದರು.
ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಚೈತನ್ಯ ತುಂಬುವ ಕೆಲಸ ಮಾಡುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ. ಮುಂಬರುವ ಎಲ್ಲ ಚುನಾವಣೆಗೆ ಈಗಿನಿಂದಲೇ ಸನ್ನದ್ದರಾಗಬೇಕಿದೆ. ಈ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಶಾಸಕರು ಯಾರೆ ಇರಲಿ, ಸರ್ಕಾರ ಯಾವುದೇ ಇರಲಿ ಎದೆಗುಂದುವುದು ಬೇಡ. ಒಗ್ಗಟ್ಟು ಇದ್ದಲ್ಲಿ ಯಾರು ಏನೂ ಮಾಡಲಾರರು ಎಂದರು.
ಮುಖಂಡ ಭವಾನಿ ಶಂಕರ್‌ಬೈರೇಗೌಡ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ನಿಶ್ಚಿತ. ಕೆಲ ಆಂತರಿಕ ಕಾರಣಗಳಿಂದಾಗಿ ಸೋಲಾಗಿದೆ. ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಸನ್ಮಾನಿಸುವ ಜತೆಗೆ ಗ್ರಾಪಂ ಚುನಾವಣೆಯಲ್ಲಿ ಸೋತ ಜೆಡಿಎಸ್ ಬೆಂಬಲಿತರನ್ನು ಹುರಿದುಂಬಿಸುವ ಕೆಲಸ ಮಾಡಬೇಕು. ಗ್ರಾಪಂಮಟ್ಟದಿಂದ ಪಕ್ಷವನ್ನು ಸಂಘಟಿಸುವ ಕೆಲಸ ಆರಂಭವಾಗಬೇಕು. ಮುಂಬರುವ ತಾಲೂಕು, ಜಿಪಂ ಚುನಾವಣೆಗೆ ಸಜ್ಜಾಗಬೇಕು ಎಂದರು.
ಬಮುಲ್ ಮಾಜಿ ಅಧ್ಯಕ್ಷ ತಿಮ್ಮರಾಜು ಮಾತನಾಡಿ, ಪಕ್ಷ ಅಧಿಕಾರದಲ್ಲಿದ್ದ ವೇಳೆ ಮಾಡಿದ ಸಾಧನೆಗಳು ಪ್ರತಿಯೊಬ್ಬ ಕಾರ್ಯಕರ್ತರಿಗೆ ಪ್ರೇರಣೆಯಾಗಬೇಕು. ಎಚ್.ಡಿ. ದೇವೇಗೌಡ ಅವರು ಬಸವಣ್ಣನಂತೆ ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನ ಮಾಡಿದರು. ಅದರಂತೆ ಸಮಾಜದ ಎಲ್ಲ ವರ್ಗಗಳ ಜನ, ಮಹಿಳೆಯರು ಅಧಿಕಾರ ಹಿಡಿಯುವಂತಾಗಿದೆ ಎಂದರು.
ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಲ್.ಜಿ.ಕೃಷ್ಣಪ್ಪ, ನಗರಸಭೆ ಸದಸ್ಯರಾದ ಎನ್.ಗಣೇಶ್, ಸುನೀಲ್‌ಮೂಡ್, ಶಿವಕುಮಾರ್, ಆಂಜಿನಪ್ಪ, ನರಸಿಂಹಮೂರ್ತಿ, ಪೂರ್ಣಿಮಾ ಸುಗ್ಗರಾಜು, ಪುಷ್ಪಲತಾ, ಶಾರದಾ ಉಮೇಶ್, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಬೂದಿಹಾಳ್ ರಾಜ್, ಸೋಂಪುರ ಹೋಬಳಿ ಅಧ್ಯಕ್ಷ ಮೋಹನ್‌ಕುಮಾರ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆ.ತಿಮ್ಮರಾಜು, ಟಿಎಪಿಸಿಎಂಸಿಎಸ್ ಮಾಜಿ ಅಧ್ಯಕ್ಷ ಗುರುಪ್ರಕಾಶ್, ಜಗಜ್ಯೋತಿಬಸವೇಶ್ವರ, ಮುಖಂಡರಾದ ಕೋಡಪ್ಪನಹಳ್ಳಿ ವೆಂಕಟೇಶ್, ಸುರೇಶ್, ನಾರಾಯಣ್‌ರಾವ್, ರಾಘವೇಂದ್ರ, ರಾಜಶೇಖರ್, ರಮೇಶ್, ಉಮೇಶ್, ಸುರೇಂದ್ರ, ಶೇಖರ್, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net