ಕಲಾವಿದರ ಗುರುತಿಸುವಿಕೆಯಿಂದ ಕಲೆ ಜೀವಂತ

cgk program
Published on

ಸಿಜಿಕೆ ರಾಜ್ಯಮಟ್ಟದ ರಂಗಪುರಸ್ಕಾರದಲ್ಲಿ ಜಾನಪದ ಸಂಶೋಧಕ ಡಾ.ಕೆ.ಎನ್.ನಾಗೇಶ್ ಹೇಳಿಕೆ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಕಲಾವಿದರನ್ನು ಗುರುತಿಸಿ ಗೌರವಿಸುವುದರಿಂದ ಕಲಾವಿದರ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಜಾನಪದ ಸಂಶೋಧಕ ಡಾ.ಕೆ.ಎನ್.ನಾಗೇಶ್ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಬೀದಿ ನಾಟಕ ಅಕಾಡೆಮಿ ಹಾಗೂ ರಂಗಶಿಕ್ಷಣ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ ಸಿಜಿಕೆ ರಾಜ್ಯಮಟ್ಟದ ರಂಗಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಗಶಿಕ್ಷಣ ಕೇಂದ್ರ ತಾಲೂಕಿನಲ್ಲಿ ಕಲಾವಿದರ ಬೆಳವಣಿಗೆಗೆ ಅವಶ್ಯವಿರುವ ವೇದಿಕೆಯನ್ನು ಕಲ್ಪಿಸಿ ಕಲಾ ಲೋಕಕ್ಕೆ ಕೊಡುಗೆ ನೀಡುತ್ತಿರುವುದು ಉತ್ತಮ ಬೆಳವಣಿಗೆ. ತನ್ನನ್ನು ತಾನು ಗುರುತಿಸಿಕೊಳ್ಳುವುದಷ್ಟೆ ಅಲ್ಲದೆ ಬದುಕುವುದನ್ನು ಕಲಿಸುವ ಕಲೆಯನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಸ್ವತಃ ಕಲಾವಿದನಾಗಿ, ಕಲಾ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುತ್ತಿರುವ ಸಿ.ಎಚ್.ಸಿದ್ದಯ್ಯ ಅವರಿಗೆ ಪುರಸ್ಕಾರ ನೀಡುತ್ತಿರುವುದು ಪುರಸ್ಕಾರಕ್ಕೆ ಸಂದ ಗೌರವವಾಗಿದೆ ಎಂದರು.
ರಾಜ್ಯ ಕಲಾವಿದರ ಒಕ್ಕೂಟದ ಅಧ್ಯಕ್ಷ ವೀರೇಶ್‌ಪ್ರಸಾದ್ ಮಾತನಾಡಿ, ನಾಟಕ ಕ್ಷೇತ್ರ ವಿಶ್ವ ವಿಖ್ಯಾತಿ ಪಡೆದು ಕೊಂಡಿದ್ದು, ನಾಡಿನ ಜಾನಪದ ಹಾಗೂ ನಾಟಕಗಳು ದೇಶ ವಿದೇಶದಲ್ಲಿ ಮನ್ನಣೆಯನ್ನು ಪಡೆದುಕೊಂಡಿವೆ. ರಾಜ್ಯಾದಾದ್ಯಂತ 30ಲಕ್ಷಕ್ಕೂ ಹೆಚ್ಚು ಕಲಾವಿದರಿದ್ದು, ಕಲೆ ಮತ್ತು ಕಲಾವಿದರನ್ನು ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ್ದು. ಕಲಾವಿದರ ಸಂಕಷ್ಟದ ಬಗ್ಗೆ ಯಾರೊಬ್ಬ ರಾಜಕೀಯ ವ್ಯಕ್ತಿಗಳು ಸದನದಲ್ಲಿ ಮಾತನಾಡುತ್ತಿಲ್ಲ. ಬಜೆಟ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 250ಕೋಟಿ ರೂ.ನೀಡುತ್ತಿದ್ದಾರೆ. ಸರ್ಕಾರ ಕನಿಷ್ಠ 1ಸಾವಿರ ಕೋಟಿ ರೂ. ಇಲಾಖೆಗೆ ನೀಡಿದಲ್ಲಿ ಸಾಕಷ್ಟು ಬೆಳವಣಿಗೆಗಳನ್ನ ನಿರೀಕ್ಷಿಸಬಹುದು ಎಂದರು.

ರಂಗ ಕಲೆಗೆ ಅನುದಾನ ತಂದ ಸಿಜಿಕೆ ಸಿ.ಜಿ.ಕೃಷ್ಣಸ್ವಾಮಿ ಅವರು ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಸರ್ಕಾರ ನೀಡುವ 12ಲಕ್ಷ ರೂ. ಅನುದಾನದ ಜತೆಗೆ ಇತರರ ಸಹಾಯದಿಂದ ಸುಮಾರು 50ಲಕ್ಷ ಮೌಲ್ಯದ ಬೃಹತ್ ಕಾರ್ಯಕ್ರಮವನ್ನು ರೂಪಿಸಿದ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ಬೀದಿನಾಟಕ ಹುಟ್ಟಿಗೆ ಕಾರಣವಾದ ಸಿ.ಜಿ.ಕೃಷ್ಣಸ್ವಾಮಿ ಜನ್ಮದಿನವನ್ನು ಬೀದಿರಂಗ ದಿನವಾಗಿ ಆಚರಿಸುವುದರ ಜತಗೆ ರಂಗಭೂಮಿಯಲ್ಲಿ ಸಾಧನೆ ಮಾಡಿರುವ ಕಲಾವಿದರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪುರಸ್ಕಾರ ನೀಡಲಾಗುತ್ತಿದೆ ಎಂದು ರಂಗಶಿಕ್ಷಣ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದರಾಜು ಹೇಳಿದರು.

ರಂಗ ಶಿಕ್ಷಣ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ, ಗ್ರಾಮೀಣ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಸದಾನಂದ ಆರಾಧ್ಯ, ರೈತ ಹಿತ ರಕ್ಷಣಾ ಸಮಿತಿ ಕಾರ್ಯದರ್ಶಿ ಕಾಚನಹಳ್ಳಿ ರಮೇಶ್, ತಾಲೂಕು ಕಲಾವಿದರ ಬಳಗದ ಅಧ್ಯಕ್ಷ ಡಾ.ಜಿ.ಗಂಗರಾಜು, ಉಪನ್ಯಾಸಕ ಮಾರುತಿ, ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮಮುನಿರಾಜು, ಸದಸ್ಯ ಮಂಜುನಾಥಯ್ಯ, ಕಲಾವಿದ ದೊಡ್ಡಿಶಿವರಾಂ, ಪ್ರಕಾಶ್‌ಮೂರ್ತಿ, ದೊಡ್ಡೇರಿ ಬೈಲಪ್ಪ, ಚಿಕ್ಕಮಾರನಹಳ್ಳಿದಿನೇಶ್, ಬೂದಿಹಾಲ್‌ಕಿಟ್ಟಿ, ನಾಗರತ್ನಮ್ಮ, ಗಂಗಮ್ಮ, ಹನುಮಂತಮ್ಮ, ಎಚ್.ಆಶಾ, ಶ್ರೀನಿವಾಸ್, ಗಂಗರಾಜು, ಪವನ್‌ಕುಮಾರ್, ಚೇತನ್, ನವೀನ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net