

ನೆಲಮಂಗಲ: ತಿಂಗಳ ಹಿಂದೆಯಷ್ಟೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದ ನಗರಸಯಲ್ಲಿ ಈಗ ಸ್ಥಾಯಿಸಮಿತಿ ಅಧ್ಯಕ್ಷ ಸ್ಥಾನ ಅಲಂಕರಿಸಲು ಆಕಾಂಕ್ಷಿತರ ಸಂಖ್ಯೆ ಅಧಿಕವಾಗಿದ್ದು, ಪೈಪೋಟಿಗೆ ಕಾರಣವಾಗಿದೆ.
2019ರ ಡಿಸೆಂಬರ್‌ನಲ್ಲಿ ನೆಲಮಂಗಲ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ್ದು ಪುರಸಭೆಯ 23 ಸ್ಥಾನಗಳಿಂದ ಆಯ್ಕೆಯಾಗಿದ್ದ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಒಗ್ಗಟ್ಟಿನಿಂದ 3 ವರ್ಷ ಕಾನೂನು ಹೋರಾಟ ಮಾಡಿ, ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದನ್ವಯ ನಗರಸಭೆ ನೂತನ ಆಡಳಿತ ಮಂಡಳಿ ರಚಿಸಲಾಗಿದೆ.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಷ್ಟೇ ಪ್ರಮುಖವೆಂದು ಭಾವಿಸಿರುವ ಕೆಲ ಸದಸ್ಯರು, ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನ ಅಲಂಕರಿಸಲು ಸಜ್ಜಾಗಿದ್ದು, ಬೆಂಬಲಿತ ಸದಸ್ಯರ ಗುಂಪು ಕಟ್ಟಿಕೊಂಡು ಅಧ್ಯಕ್ಷರ ಮನೆಗೆ ಎಡತಾಕುತ್ತಿದ್ದಾರೆ.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೂ ಮುನ್ನ ಮೂರು ಪಕ್ಷಗಳ ಸದಸ್ಯರು ಹಾಗೂ ಹೆಚ್ಚುವರಿ ಸದಸ್ಯರು ಸಭೆ ನಡೆಸಿ, ಅಧಿಕಾರವನ್ನು ಸಮಾನವಾಗಿ ಹಂಚಿಕೊಳ್ಳಲು ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದರು. ಅದರಂತೆ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ, ಎಸ್‌ಸಿ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಈಗ ಖಾಲಿ ಇರುವ ಸ್ಥಾಯಿ ಸಮಿತಿ ಸ್ಥಾನಕ್ಕೆ ಆಕಾಂಕ್ಷಿತರು ಹೆಚ್ಚಾಗಿದ್ದು, ಅವಿರೋಧ ಆಯ್ಕೆಗೆ ತೊಡಕಾಗಿದೆ.ಆಕಾಂಕ್ಷಿತರು ಯಾರು: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಎನ್.ಗಣೇಶ್, ಜೆಡಿಎಸ್‌ನ ಜಿ.ಆನಂದ್, ಆರ್.ಸುನೀಲ್ ಮೂಡ್, ಕಾಂಗ್ರೆಸ್‌ನ ಸಿ.ಪ್ರದೀಪ್ ಅವರ ಹೆಸರು ಕೇಳಿ ಬರುತ್ತಿದೆ. ಹಾಗೆಯೇ ನಗರಸಭೆಯಿಂದ ನೆಲಮಂಗಲ ಯೋಜನಾ ಪ್ರಾಧಿಕಾರಕ್ಕೆ ನಾಮನಿರ್ದೇಶನ ಮಾಡುವ ಸ್ಥಾನಕ್ಕೆ ಜೆಡಿಎಸ್‌ನ ಕೆ.ಎಂ.ಶಿವಕುಮಾರ್ ಆಕಾಂಕ್ಷಿತರಾಗಿದ್ದಾರೆ.
ಈಗಾಗಲೇ ಅಧ್ಯಕ್ಷ ಸ್ಥಾನ ಜೆಡಿಎಸ್, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಸದಸ್ಯರು ಅಲಂಕರಿಸಿರುವುದರಿಂದ ಬಿಜೆಪಿ ಸದಸ್ಯರಿಗೆ ಸ್ಥಾಯಿಸಮಿತಿ ಅಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟಲ್ಲಿ 27 ಸದಸ್ಯರ ಒಗ್ಗಟ್ಟಿನ ಮಂತ್ರಕ್ಕೆ ಸಾಮಾಜಿಕ ನ್ಯಾಯ ದೊರಕಿಸಿದಂತಾಗಲಿದೆ. ಇಲ್ಲವಾದಲ್ಲಿ ಗುಂಪುಗಾರಿಕೆಗೆ ಎಡೆ ಮಾಡಿಕೊಡುವುದು ನಿಚ್ಚಳವಾಗಿದೆ.
ಜು.25 ರಂದು ಸರ್ವಸದಸ್ಯರ ಸಾಮಾನ್ಯ ಸಭೆ ಕರೆಯಲಾಗಿದ್ದು, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ, ಎನ್‌ಪಿಎಗೆ ನಾಮನಿರ್ದೇಶನ ಮಾಡುವ ಕುರಿತಾಗಿ ಚರ್ಚಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಆಡಳಿತ ಮಂಡಳಿ ರಚನೆಗೂ ಮುನ್ನ ಮೂರು ಪಕ್ಷಗಳ ಸದಸ್ಯರೆಲ್ಲ ಒಟ್ಟಾಗಿ ಪಕ್ಷಾತೀತವಾಗಿ ಅಧಿಕಾರ ಹಂಚಿಕೊಳ್ಳುವ ಒಮ್ಮತದ ಅಭಿಪ್ರಾಯಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿಯ ಮೊದಲ ಕೆಲ ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ಬಯಸುತ್ತಿದ್ದು, ಸರ್ವ ಸದಸ್ಯರು ಒಪ್ಪುವ ಭರವಸೆ ಇರುವುದಾಗಿ ಸದಸ್ಯ ಎನ್.ಗಣೇಶ್ ತಿಳಿಸಿದ್ದಾರೆ.
ಮೂರು ವರ್ಷ ಒಗ್ಗಟ್ಟಿನಿಂದ ಹೋರಾಟ ಮಾಡಿ ಪಕ್ಷಾತೀತವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಮಾಡಲಾಗಿದೆ. ಒಂದೆಡೆ ಸೇರಿ ಚರ್ಚಿಸಿ ಒಮ್ಮತದ ಅಭಿಪ್ರಾಯಕ್ಕೆ ಬಂದು ಉಳಿದ ಸ್ಥಾನಗಳಿಗೆ ಪಕ್ಷಾತೀತವಾಗಿ ಆಯ್ಕೆ ಮಾಡಲಾಗುವುದು. ಸದಸ್ಯರ ನಡುವೆ ಬಿರುಕಿಗೆ ಅವಕಾಶ ಮಾಡಿಕೊಡುವುದಿಲ್ಲ.
| ಲತಾ ಹೇಮಂತ್ ಕುಮಾರ್ ನಗರಸಭೆ ಅಧ್ಯಕ್ಷೆ