

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಶಿಕ್ಷಣ ರಂಗದಲ್ಲಿ ಹಲವು ಚೇತನಗಳಿಗೆ ಸ್ಫೂರ್ತಿಯಾಗಿರುವನಿವೃತ್ತ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ತಿಮ್ಮಯ್ಯ ತಿಳಿಸಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ವಯೋ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಗುರು ಎಂಬ ಪದಕ್ಕೆ ಪೂಜನೀಯ ಸ್ಥಾನವಿದೆ. ಬೋಧನಾ ಕೌಶಲದಿಂದ ಶಿಕ್ಷಣ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಸರ್ವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಸಾರ್ಥಕ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕರ ಸೇವೆ ಇಲಾಖೆಗೆ ತೃಪ್ತಿ ತಂದಿದೆ. ಅವರು, ಮುಂದಿನ ನಿವೃತ್ತಿ ಜೀವನವನ್ನು ಬಯಸಿ ಬಂದ ವಿದ್ಯಾರ್ಥಿಗಳಿಗೆ ಹಾಗೂ ಕಿರಿಯ ಉಪನ್ಯಾಸಕರಿಗೆ ಮಾರ್ಗದರ್ಶನ ನೀಡುವ ಮೂಲಕ ಶಿಕ್ಷಣ ರಂಗದಲ್ಲಿ ಮಾರ್ಗದರ್ಶಕರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳ ಬೇಕು ಎಂದರು.
ತಾಲೂಕಿನಾದ್ಯಂತ 17 ಮಂದಿ ಶಿಕ್ಷಕರು ನಿವೃತ್ತಿ ಹೊಂದಿದ್ದು, ಅವರ ನಿವೃತ್ತಿ ಜೀವನ ಸುಖಕರವಾಗಿರಲಿ. ನಿವೃತ್ತಿ ನಂತರವೂ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶವಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಗ್ರಾಮೀಣ ಶಾಲಾ ಶಿಕ್ಷಕ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್, ಶಿಕ್ಷಕ ಮುರುಳಿ, ರೇಣುಕಾಸ್ವಾಮಿ ಮತ್ತಿತರರು ಉಪಸ್ಥಿತರಿದರು.
ಬೀಳ್ಕೊಡುಗೆ: ತಾವರೆಕೆರೆ ಶಾಲೆಯ ಮಂಜುಳಾ, ಮಣ್ಣೆಯ ಶ್ರೀಧರ್, ಹತ್ತುಗುಂಟಿನಪಾಳ್ಯದ ಮಂಜುನಾಥ್, ಮಂಚೇನಹಳ್ಳಿಯ ನರಸಿಂಹಮೂರ್ತಿ, ಬೈರಸಂದ್ರದ ವೆಂಕಟರಾಮು, ಹೊನ್ನರಾಯನಹಳ್ಳಿಯ ಜಗದಾಂಬಾ, ತಿಮ್ಮಸಂದ್ರದ ಮುನಿಗಂಗಯ್ಯ, ಸೋಂಪುರದ ಟಿ.ಗಂಗರಾಜು, ಹುಚ್ಚುವೀರಯ್ಯನಪಾಳ್ಯದ ನಾರಾಯಣ್, ಬೆಣಚನಹಳ್ಳಿಯ ಸಂಪತ್, ಎಲೆಕ್ಯಾತನಹಳ್ಳಿಯ ಪಾರ್ವತಮ್ಮ, ಅಪ್ಪಗೊಂಡನಹಳ್ಳಿಯ ಉಮೇಶ್, ತ್ಯಾಮಗೊಂಡ್ಲು ಮಹಮದ್‌ಗೌಸ್, ಹನುಮಕ್ಕ, ದೇಗನಹಳ್ಳಿಯ ಸುಶೀಲಮ್ಮ, ಮೊದಲಕೋಟೆಯ ದಿವಾಕರ್, ಓಬಳ್ಳಾಪುರದ ಗೋವಿಂದರಾಜು ಸೇರಿ 17 ಮಂದಿ ಶಿಕ್ಷಕರು ನಿವೃತ್ತಿ ಹೊಂದಿದ್ದ ಹಿನ್ನೆಲೆಯಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.