

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಸಮಾಜಕ್ಕೆ ಉತ್ತಮ ಸಂದೇಶ ಹಾಗೂ ಮಾನವೀಯ ಮೌಲ್ಯ ಬಿತ್ತುವಲ್ಲಿ ನಾಟಕಗಳು ಮುಖ್ಯಪಾತ್ರ ವಹಿಸುತ್ತವೆ ಎಂದು ಅಂತಾರಾಷ್ಟ್ರೀಯ ಜಾನಪದ ಕಲಾವಿದ ಜೋಗಿಲ ಸಿದ್ದರಾಜು ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂಜನಾದ್ರಿ ಕಲಾನಿಕೇತನ ಟ್ರಸ್ಟ್‌ನಿಂದ ಶ್ರಾವಣ ಸಂಭ್ರಮ ಪ್ರಯುಕ್ತ ಆಯೋಜಿಸಿದ್ದ ಊರು ಭಂಗ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ನೆಲಮಂಗಲ ರಂಗ ಚಟುವಟಿಕೆ ಜೀವಂತವಾಗಿರುವ ತಾಲೂಕಾಗಿದೆ. ಕಲಾವಿದರಲ್ಲಿರುವ ಪ್ರತಿಭೆ ಗುರುತಿಸಿ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಾಕಷ್ಟು ಸಂಸ್ಥೆಗಳು ಶ್ರಮಿಸುತ್ತಿವೆ. ಕಲಾವಿದನ ಆರಾಧ್ಯ ದೈವ ಕಲಾ ಸರಸ್ವತಿಯಾಗಿದ್ದು, ಶ್ರದ್ಧೆ ಮತ್ತು ನಿಷ್ಟೆಯಿಂದ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಲ್ಲಿ ಸಾಧನೆ ಮಾಡಬಹುದಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿಕೊಂಡ ಕಲೆ ಇಂದು ವಿಶ್ವಮಾನ್ಯತೆಯನ್ನು ಪಡೆದುಕೊಂಡಿರುವುದು ಪ್ರತಿಯೊಬ್ಬರೂ ಹೆಮ್ಮೆ ಪಡುವ ವಿಷಯ. ಪಾಲಕರು ಮಕ್ಕಳಿಗೆ ಶಿಕ್ಷಣದ ಜತೆಗೆ ರಂಗಭೂಮಿಯಲ್ಲೂ ತೊಡಗಿಸಿಕೊಳ್ಳಲು ಪ್ರೇರೇಪಿಸಿದರೆ ರಂಗ ಭೂಮಿ ಉಳಿವಿಗೆ ಸಹಕಾರಿಯಾಗುತ್ತದೆ ಎಂದರು.
ತಾಲೂಕು ಕಲಾವಿದರ ಬಳಗದ ಅಧ್ಯಕ್ಷ ಡಾ.ಜಿ.ಗಂಗರಾಜು ಮಾತನಾಡಿ, ರಾಮಾಯಣ ಮತ್ತು ಮಹಾಭಾರತ ಎಂಬ ಮಹಾಕಾವ್ಯಗಳು ಸಾಕಷ್ಟು ಇತಿಹಾಸ ತಿಳಿಸುತ್ತವೆ. ಊರು ಭಂಗ ನಾಟಕದಲ್ಲಿ ಖಳನಾಯಕ ಈ ಸಮಾಜಕ್ಕೆ ನೀಡಿದ್ದ ಸಂದೇಶ ಪ್ರಾಮುಖ್ಯತೆ ಪಡೆದುಕೊಂಡಿದೆ. ಮೂಲ ಕಥೆಯನ್ನು ವಿಭಿನ್ನವಾಗಿ ಅಭಿನಿಸುವ ಜತೆಗೆ ಪ್ರಸ್ತುತ ಕಾಲಮಾನಕ್ಕೆ ಅನುಗುಣವಾಗಿ ನಾಟಕವನ್ನು ಕಟ್ಟುಕೊಡುವುದು ಬಹಳಮುಖ್ಯ ಎಂದರು.
ಮರಾಠಿ ಮೂಲದ ಭಾಸಕವಿ ರಚನೆಯ ಕನ್ನಡಕ್ಕೆ ಡಾ.ಸಿ.ಪಿ.ಕೃಷ್ಣಕುಮಾರ್ ಅನ್ವಾದಿಸಿದ ಚಿಕ್ಕಮಾನಹಳ್ಳಿ ದಿನೇಶ್ ನಿರ್ದೇಶನದಲ್ಲಿ ಊರುಭಂಗ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ರೈತ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ರಮೇಶ್,ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಡಿ.ಸಿದ್ಧರಾಜು, ಅಂಜನಾದ್ರಿ ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಚಿಕ್ಕಮಾರನಹಳ್ಳಿದಿನೇಶ್, ಕಾರ್ಯದರ್ಶಿ ಜಿ.ಎನ್.ಕನಕರಾಜು, ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಪ್ರಕಾಶ್‌ಮೂರ್ತಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಬೂದಿಹಾಳ್‌ಕಿಟ್ಟಿ, ತಾಲೂಕು ಪ್ರಧಾನ ಕಾರ್ಯದರ್ಶಿ ಅಭಿಷೇಕ್, ಸಾಹಿತಿ ವೆಂಕಟೇಶ್‌ಚೌಥಾಯಿ, ವೈ.ಆನಂದ್, ಯುವಶಕ್ತಿ ರಾಜ್ಯಸಂಚಾಲಕ ಅನಂತ್‌ಕುಮಾರ್, ಮುಖಂಡ ಕೇಶವ್, ಕಲಾವಿದ ಮುನಿರಾಜು, ಪ್ರವೀಣ್, ಶ್ರೀನಿವಾಸ್,ಕೀರ್ತನ್, ಮನು, ಧರ್ಮೇಶ್, ನಂದೀಶ್, ಅಮೃತ, ನಿಖಿತಾರಾಥೋಡ್, ಹಂಸವೇಣಿ ಮತ್ತಿತರರು ಉಪಸ್ಥಿತರಿದರು.