

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಬಾಣಂತಿಯರು ಪೌಷ್ಠಿಕ ಆಹಾರ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜ ಭೂತೆ ಸಲಹೆ ನೀಡಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆಯಿಂದ ಆಯೋಜಿಸಿದ್ದ ಬಾಣಂತಿಯರಿಗೆ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಶ್ರಮಿಕ ಹಾಗೂ ಬಡ ತಾಯಂದಿರ ತೊಂದರೆಗಳನ್ನು ದೂರ ಮಾಡುವ ಸಣ್ಣ ಪ್ರಯತ್ನದ ಜತೆಗೆ, ತಾಯಂದಿರ ಹಾಗೂ ಮಕ್ಕಳ ಆರೋಗ್ಯಕ್ಕಾಗಿ ರೋಟರಿ ಸಂಸ್ಥೆ ಕಿಟ್ ನೀಡಿರುವುದು ಸಂತೋಷದ ಸಂಗತಿ. ತಾಯಂದಿರು ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಕಾಲಕಾಲಕ್ಕೆ ಅವರಿಗೆ ನೀಡಬೇಕಾದ ಪೌಷ್ಠಿಕ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ರೋಟರಿ ಅಧ್ಯಕ್ಷ ಎಂ.ಟಿ.ನವೀನ್ ಕುಮಾರ್ ಮಾತನಾಡಿ, ಪ್ರಪಂಚದ ಎಲ್ಲ ರೋಟರಿ ಕ್ಲಬ್‌ಗಳು ಜುಲೈ ತಿಂಗಳನ್ನು ಮಕ್ಕಳ ಹಾಗೂ ತಾಯಿಯ ಆರೋಗ್ಯದ ಉನ್ನತಿಗಾಗಿ ಮೀಸಲಿಟ್ಟು, ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತವೆ. ತಾಯಂದಿರು ಹಾಗೂ ಮಕ್ಕಳ ಪೌಷ್ಠಿಕಾಂಶ ಉತ್ತಮಗೊಳಿಸುವ ಹಾಗೂ ಅವರಿಗೆ ಉಪಯೋಗವಾಗುವಂತಹ ವಸ್ತುಗಳನ್ನು ನೀಡುವುದಕ್ಕೆ ರೋಟರಿ ಸಂಸ್ಥೆ ಉದಾರ ಕೊಡುಗೆಗಳನ್ನು ನೀಡುತ್ತದೆ. ದೇಶದಲ್ಲಿ ಪೌಷ್ಠಿಕಾಂಶ ಕೊರತೆಯ ಅನೇಕ ಉದಾಹರಣೆಗಳು ಇಂದಿಗೂ ಇವೆ. ಅದನ್ನು ತಡೆಗಟ್ಟುವ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.
ಈಗಾಗಲೇ ಪೋಲಿಯೋ ನಿರ್ಮೂಲನೆಗೆ 40 ವರ್ಷಗಳಿಂದ ಕೆಲಸ ಮಾಡಿ, ಭಾರತ ಪೊಲೀಯೋ ಮುಕ್ತ ಎಂದು ಗುರುತಿಸಲು ಕಾರಣವಾಗಿದೆ. ರೋಟರಿ ಸಂಸ್ಥೆ ಶಿಕ್ಷಣ ಮತ್ತು ಆರೋಗ್ಯದಂತಹ ಮುಖ್ಯ ವಿಷಯಗಳ ಬಗ್ಗೆ ಹೆಚ್ಚು ಕೆಲಸ ಮಾಡುತ್ತಿದೆ. ದೇಶದ ಮಕ್ಕಳು ಸುಶಿಕ್ಷಿತರಾಗುವ ಕಡೆಗೆ ಗಮನ ನೀಡಬೇಕು. ಅವರ ಆರೋಗ್ಯದ ಬಗ್ಗೆಯೂ ಸಾಮಾಜಿಕವಾಗಿ ಕಾಳಜಿ ತೆಗೆದುಕೊಳ್ಳಬೇಕು ಎಂಬುದು ನಮ್ಮ ಧ್ಯೇಯ್ಯವಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡುತ್ತಿವೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಹೇಮವತಿ, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸೋನಿಯಾ, ವೈದ್ಯ ಡಾ.ನಾಗರಾಜು, ರೋಟರಿ ನಿರ್ದೇಶಕರಾದ ಎಸ್.ಗಂಗರಾಜು, ರವಿಕುಮಾರ್, ಉಮಾನಾರಾಯಣ್, ಮಾಜಿ ಅಧ್ಯಕ್ಷ ಸಿ.ಜಿ.ಮಂಜುನಾಥ್, ಸದಸ್ಯೆ ವನಿತಾ, ಪದ್ಮಾ, ಇನ್ನರ್ ವ್ಹೀಲ್ ಅಧ್ಯಕ್ಷೆ ತನುಜಾ ಸಂತೋಷ್, ನಿಕಟಪೂರ್ವ ಅಧ್ಯಕ್ಷ ಶಾರದ ಸುಂದರೇಶ್, ಮಾಜಿ ಅಧ್ಯಕ್ಷೆ ಕೋಮಲಾ ರಾಜ್, ಸದಸ್ಯೆ ನಳಿನಾ ಇದ್ದರು.