

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಮಕ್ಕಳಲ್ಲಿರುವ ಕ್ರೀಡಾಸಕ್ತಿ ಪ್ರೋತ್ಸಾಹಿಸಲು ಶಿಕ್ಷಕರ ಜತೆಗೆ ಪಾಲಕರು ಹಾಗೂ ಸಂಘ-ಸಂಸ್ಥೆಗಳು ಸಹಕರಿಸಬೇಕು ಎಂದು ನಗರಸಭೆ ಸದಸ್ಯ ಸಿ.ಪ್ರದೀಪ್ ಕುಮಾರ್ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಸುಭಾಷ್‌ನಗರ ಸರ್ಕಾರಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ರೋಟರಿ ಸಂಸ್ಥೆಯಿಂದ ಆಯೋಜಿಸಿದ್ದ ಉಚಿತ ಕ್ರೀಡಾ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಅಂತಾರಾಷ್ಟ್ರೀಯಮಟ್ಟದಲ್ಲಿ ಖ್ಯಾತಿ ಗಳಿಸಿದ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಕ್ರೀಡೆ ಬಗ್ಗೆ ಆಸಕ್ತಿ ಹೊಂದಿದ ಪ್ರತಿಭೆಗಳನ್ನು ಗುರುತಿಸಿ, ಸೂಕ್ತ ತರಬೇತಿ ನೀಡಿ, ಪ್ರೋತ್ಸಾಹಿಸಿದರೆ ನಾಡಿಗೆ ಕೀರ್ತಿ ತರುತ್ತಾರೆ. ಗ್ರಾಮೀಣ ಮಕ್ಕಳಿಗೆ ಕ್ರೀಡೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾ ಸಮವಸ್ತ್ರ ನೀಡುತ್ತಿರುವ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ರೋಟರಿ ಅಧ್ಯಕ್ಷ ಎಂ.ಟಿ.ನವೀನ್ ಕುಮಾರ್ ಮಾತನಾಡಿ, ಸರ್ಕಾರಿ ಶಾಲೆ, ಗ್ರಾಮೀಣ ಭಾಗದ ಮಕ್ಕಳು ಎಂಬ ಹಿಂಜರಿಕೆ ಬೇಡ. ಪ್ರತಿಭೆ ಎನ್ನುವುದು ಒಬ್ಬರ ಸ್ವತ್ತಲ್ಲ. ಪ್ರತಿಭೆ ಇದೆ ಎಂದರೆ ಜಗತ್ತು ನಿಮ್ಮನ್ನು ಗುರುತಿಸಿ, ಸೆಳೆದುಕೊಳ್ಳುತ್ತದೆ. ಅದಕ್ಕಾಗಿ ಮಕ್ಕಳು ಸಾಮರ್ಥ್ಯ ಪ್ರದರ್ಶಿಸಬೇಕು ಎಂದರು.
ರೋಟರಿ ಸಂಸ್ಥೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಕ್ರೀಡಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಕೆಲ ಶಾಲೆಗಳಿಗೆ ಕ್ರೀಡಾ ಸಮವಸ್ತ್ರ ಸೇರಿ ಕ್ರೀಡಾ ಸಾಮಗ್ರಿಗಳನ್ನು ವಿತರಿಸುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಸದುಪಯೋಗ ಪಡಿಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದರು.
ಸುಮಾರು 25 ಮಂದಿಗೆ ಕ್ರೀಡಾ ಸಮವಸ್ತ್ರ ವಿತರಣೆ ಮಾಡಲಾಯಿತು. ರೋಟರಿ ಕಾರ್ಯದರ್ಶಿ ಶಿವರಾಮಯ್ಯ, ನಿರ್ದೇಶಕ ಗಂಗರಾಜು, ಸದಸ್ಯೆ ವೀಣಾ ಪ್ರದೀಪ್, ಮಾಜಿ ಅಧ್ಯಕ್ಷ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.