ನೆಲಮಂಗಲ ಪುರಸಭೆಯೋ, ನಗರಸಭೆಯೋ?, ಮೇಲ್ದರ್ಜೆಗೇರಿಸಿದ್ದರೂ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟ

15 Nela ph 01 Nelamangala City Municipal Council Office
Published on

ಸುಗ್ಗರಾಜು ಜಿ.ಕೆ. ನೆಲಮಂಗಲ

ನೆಲಮಂಗಲ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿ ರಾಜ್ಯಪತ್ರದಲ್ಲಿ ಘೋಷಣೆ ಮಾಡಿರುವ ರಾಜ್ಯ ಸರ್ಕಾರ ಈಗ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಆದೇಶ ನೀಡಿರುವುದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಮೇಲ್ದರ್ಜೆಗೇರಿಸುವಂತೆ 2016ರಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಗೆ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಅನುಮೋದಿಸಿ ರಾಜ್ಯಪಾಲರ ಅಂಗೀಕಾರಕ್ಕೆ ಕಳುಹಿಸಿತ್ತು. ಈ ಮಧ್ಯೆ 2019ರ ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಾಗಿದ್ದರಿಂದ ರಾಜ್ಯಪಾಲರ ಕಚೇರಿಯಿಂದ ಕಡತ ಸರ್ಕಾರಕ್ಕೆ ವಾಪಸಾಗಿತ್ತು. ಲೋಕಸಭಾ ಚುನಾವಣೆ ನಡೆದ ಕೆಲ ದಿನಗಳಲ್ಲೇ ರಾಜ್ಯದ ಪುರಸಭೆಗಳಿಗೆ ಚುನಾವಣೆ ದಿನಾಂಕ ನಿಗದಿ ಮಾಡಿದ್ದ ಆಯೋಗ ಅಧಿಸೂಚನೆ ಹೊರಡಿಸಿತ್ತು.

ಮೇಲ್ದರ್ಜೆಗೇರಿಸುವ ವಿಚಾರಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದ್ದು ರಾಜ್ಯಪಾಲರ ಅಂಗೀಕಾರ ಮಾತ್ರ ಬಾಕಿ ಇದೆ. ಪುರಸಭೆಗೆ ಚುನಾವಣೆ ರದ್ದು ಮಾಡಿ ನಗರಸಭೆಗೆ ಚುನಾವಣೆ ನಡೆಸುವಂತೆ ಕೋರಿ ಆಯೋಗದ ವಿರುದ್ಧ ಕೆಲ ಮುಖಂಡರು ನ್ಯಾಯಾಲಯದ ಮೆಟ್ಟಿಲೇರಿದ್ದು ಪುರಸಭೆ ಚುನಾವಣೆಗೆ ತಡೆಯಾಜ್ಞೆ ತಂದಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಆಯೋಗದ ನಡೆಯನ್ನೇ ಎತ್ತಿಹಿಡಿದು ತಡೆಯಾಜ್ಞೆ ತೆರವುಗೊಳಿಸಿದ್ದರಿಂದ 2019 ಜೂನ್ 1ರಂದು ಪುರಸಭೆಯ 23 ಸ್ಥಾನಗಳಿಗೆ ಚುನಾವಣೆ ನಡೆಸಲಾಗಿತ್ತು. ಒಟ್ಟು 23 ಸ್ಥಾನಗಳ ಪೈಕಿ 13 ಜೆಡಿಎಸ್, 7 ಕಾಂಗ್ರೆಸ್, 2 ಬಿಜೆಪಿ, 1 ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ಅದಾದ ಬಳಿಕ ರಚನೆಯಾದ ಬಿಜೆಪಿ ಸರ್ಕಾರ ಮತ್ತೆ ನಗರಸಭೆ ಮೇಲ್ದರ್ಜೆ ವಿಚಾರವನ್ನು ರಾಜ್ಯಪಾಲರ ಮುಂದಿಟ್ಟು ಅಂಗೀಕಾರ ಪಡೆದುಕೊಂಡಿದ್ದು, ನಗರಾಭಿವೃದ್ಧಿ ಸಚಿವಾಲಯ 2020ರ ಡಿಸೆಂಬರ್ 26 ರಂದು ಅಧಿಸೂಚನೆ ಹೊರಡಿಸಿತ್ತು. ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಆದರೆ ಈಗ ಪುರಸಭೆ ಅಧ್ಯಕ್ಷರ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಿಸಿರುವುದು ನಾಗರಿಕರಲ್ಲಿ ಗೊಂದಲ ಮೂಡಿಸಿದೆ.

ಮತ್ತೊಂದೆಡೆ 2019ರ ಪುರಸಭೆ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳು ಹಾಗೂ ಮುಂಬರುವ ಮಾರ್ಚ್ 31ಕ್ಕೆ ಅಧಿಕಾರಾವಧಿ ಪೂರ್ಣಗೊಂಡು ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಗ್ರಾಪಂಗಳ ಕೆಲ ಸದಸ್ಯರು (ನಗರಸಭಾ ಚುನಾವಣಾ ಆಕಾಂಕ್ಷಿತರು) ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ತಡೆಯುವ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಆದರೆ ನಗರಸಭಾ ವ್ಯಾಪ್ತಿಗೆ ಒಳಪಡುತ್ತಿರುವ ಗ್ರಾಪಂ ಅಧಿಕಾರಾವಧಿ ಇನ್ನೂ ಪೂರ್ಣಗೊಂಡಿಲ್ಲದಿರುವುದು ಒಂದೆಡೆಯಾದರೆ, ದಾಖಲೆಗಳ ಹಸ್ತಾಂತರ, ಗಡಿ ಗುರುತು ಪ್ರಕ್ರಿಯೆ ಸೇರಿ ನಗರಸಭಾ ಚುನಾವಣೆ ನಡೆಸಲು ಬೇಕಾಗಿರುವ ಕ್ಷೇತ್ರಗಳ ವಿಂಗಡಣೆಯಂತಹ ಅನೇಕ ಕಾರ್ಯಗಳು ಬಾಕಿ ಇದ್ದು, ಇನ್ನೂ ಸಾಕಷ್ಟು ಕಾಲಾವಕಾಶ ಬೇಕಿರುವುದರ ನಡುವೆ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ರದ್ದು ಮಾಡಿ ನಗರಸಭೆಗೆ ಚುನಾವಣೆ ನಡೆಸಬೇಕೆಂದು ಕಾನೂನು ಹೋರಾಟಕ್ಕೆ ಮುಂದಾಗಿರುವ ಮಂದಿಗೆ ಎಷ್ಟರಮಟ್ಟಿಗೆ ಜಯ ದೊರೆಯಲಿದೆ ಕಾದು ನೋಡಬೇಕಿದೆ.

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಕುರಿತಾದ ಮೀಸಲಾತಿ ಅಧಿಸೂಚನೆ ಪ್ರಕಟವಾಗಿದ್ದು, ಜಿಲ್ಲಾಧಿಕಾರಿ ಆದೇಶದಂತೆ ನೆಲಮಂಗಲ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ನಿಯಮಾನುಸಾರ ಚುನಾವಣೆ ನಡೆಸಲಾಗುವುದು. ಎಂ.ಶ್ರೀನಿವಾಸಯ್ಯ, ತಹಸೀಲ್ದಾರ್

ಸರ್ಕಾರ ಮಧ್ಯಪ್ರವೇಶಿಸಲಿ: ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿರುವ ಸರ್ಕಾರದ ಕ್ರಮ ಮೆಚ್ಚುವಂತಹದ್ದು, ಆದರೆ ನಿಯಮಾನುಸಾರ ಪಾರದರ್ಶಕ ಚುನಾವಣೆಯಲ್ಲಿ ಆಯ್ಕೆಯಾದ ಚುನಾಯಿತರಿಗೆ ಅಧಿಕಾರ ಚಲಾಯಿಸಲು ಅವಕಾಶ ನೀಡದಿರುವುದು ಎಷ್ಟರ ಮಟ್ಟಿಗೆ ಸರಿ?, ಚುನಾಯಿತರಿಗೆ ಅನ್ಯಾಯವಾಗುವ ಪರಿಸ್ಥಿತಿ ಉದ್ಭವಿಸಿದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಸೂಕ್ತ ನಿರ್ಣಯ ತೆಗೆದುಕೊಂಡು ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿ ಅಧಿಕಾರಾವಧಿ ಮೊಟಕುಗೊಳಿಸಲು ಅವಕಾಶ ಮಾಡಿಕೊಡಬಾರದು ಎಂಬುದು ಚುನಾಯಿತರ ಮನವಿಯಾಗಿದೆ.

ಚುನಾಯಿತರ ನಿಲುವು: ಪುರಸಭೆ ಸ್ಥಾನಗಳಿಗೆ ಚುನಾವಣೆ ನಡೆಸಿದ್ದ ಆಯೋಗ ಇದೀಗ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸುತ್ತಿರುವುದು ಸಂತೋಷ ತಂದಿದೆ. ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿರುವ ಚುನಾಯಿತ ಪ್ರತಿನಿಧಿಗಳನ್ನೇ ನಗರಸಭಾ ಸದಸ್ಯರೆಂದು ಪರಿಗಣಿಸಲಿ. ನಿಯಮಾನುಸಾರ ನಗರಸಭೆ ಪ್ರಕ್ರಿಯೆಗಳ ಪೂರ್ಣಗೊಳಿಸಿ ನಗರಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಿ, ಇಲ್ಲವಾದಲ್ಲಿ ಕಾನೂನು ಹೋರಾಟಕ್ಕೆ ಸಿದ್ಧರಿರುವುದು ಚುನಾಯಿತರ ನಿಲುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net