

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಕಲಿ ದಾಖಲೆ ಸೃಷ್ಟಿಸಿ ರೈತರ ಜಮೀನನ್ನು ಅಕ್ರಮವಾಗಿ ಕಬಳಿಕೆ ಮಾಡಿಕೊಂಡಿರುವವರ ವಿರುದ್ಧ ಕ್ರಮಕೈಗೊಂಡು ನ್ಯಾಯದೊರಕಿಸಿಕೊಡಬೇಕೆಂದು ಆಗ್ರಹಿಸಿದ ಕೊಡಿಗೇಹಳ್ಳಿ, ಕೆಂಚನಪುರ ಗ್ರಾಮಗಳ ರೈತರು ನಗರದ ತಾಲೂಕು ಕಚೇರಿ ಮುಂದೆ ಸಗಣಿ ಸುರಿದುಕೊಂಡು ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಸಮಾವೇಶಗೊಂಡ ಎರಡೂ ಗ್ರಾಮದ ರೈತರು ಅಧಿಕಾರಿಗಳ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ರೈತರಿಗೆ ನ್ಯಾಯದೊರಕಿಸಿಕೊಡಬೇಕೆಂದು ಆಗ್ರಹಿಸಿ ಪ್ರತಿಭಟಿಸಿದರು.
ಅಧಿಕಾರಿಗಳು ಸ್ಪಂದಿಸಿಲ್ಲ:
ತಾಲೂಕಿನ ಕೊಡಿಗೇಹಳ್ಳಿ, ಕೆಂಚನಪುರದ 30ಕ್ಕೂ ಹೆಚ್ಚು ಕುಟುಂಬಗಳು ಜಮೀನು ನಂಬಿಕೊಂಡು ಜೀವನ ನಡೆಸುತ್ತಿವೆ. ಆದರೆ, ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಮಾಡಿದ್ದು, ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ ಎಂದು ಗ್ರಾಮದ ಮುಖಂಡ ಕೃಷ್ಣಪ್ಪ ದೂರಿದರು. 2022ರಲ್ಲಿ ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಬಳಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು. ಆಗ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರಿಂದ ಸತ್ಯಾಗ್ರಹ ಕೈಬಿಡಲಾಗಿತ್ತು. ಆದರೆ ಇದುವರೆಗೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅದ್ದರಿಂದ ಅಧಿಕಾರಿಗಳ ವಿರುದ್ಧ ಸಗಣಿ ಸುರಿದುಕೊಂಡು ಪ್ರತಿಭಟನೆ ಮಾಡಲಾಗುತ್ತಿದೆ. ಕೂಡಲೇ ಅಧಿಕಾರಿಗಳು ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿಗಳ ನಿವಾಸ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಕೊಲೆ ಬೆದರಿಕೆ: ಬೆಂಗಳೂರಿನ ಬಿ.ಎಚ್.ರಮೇಶ್, ಕೃಷ್ಣಮೂರ್ತಿ ಜಮೀನು ವಿಚಾರವಾಗಿ ಸಾಕಷ್ಟು ಬಾರಿ ಕೊಲೆ ಬೆದರಿಕೆ ಹಾಕಿದ್ದಾರೆ. 50ಕ್ಕೂ ಹೆಚ್ಚು ಬಾರಿ ಪೊಲೀಸ್, ತಹಸೀಲ್ದಾರ್ ಕಚೇರಿ ಹಾಗೂ ಜಿಲ್ಲಾಧಿಕಾರಿಗೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಡಿಸಿ ಗಮನಕ್ಕೆ ತರಲಾಗುವುದು:
ತಾಲೂಕಿನ ಓಬಳಾಪುರ ಗ್ರಾಮದ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ದಾಖಲೆ ಪತ್ರವನ್ನು ಪರಿಶೀಲನೆ ಮಾಡಿದ್ದು, ರೈತರು ನೀಡಿದ್ದ ಅರ್ಜಿಗಳು ಹೈಕೋರ್ಟ್, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ವಜಾಮಾಡಿ ಆದೇಶ ಹೊರಡಿಸಿದ್ದಾರೆ. ರೈತರು ನೀಡಿದ್ದ ಮನವಿಯನ್ನು ಮತ್ತೊಮ್ಮೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ತಹಸೀಲ್ದಾರ್ ಕೆ.ಅರುಂಧತಿ ಪ್ರತಿಕ್ರಿಯಿಸಿದರು.