

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರದ ಸುಭಾಷ್‌ನಗರದ ವಿಶಾಲ್ ಆಂಗ್ಲ ಶಾಲೆಯಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕಿಯರು, ಪುಟಾಣಿ ಮಕ್ಕಳ ಕೃಷ್ಣ-ರಾಧೆ ಹಾಗೂ ಯಶೋಧರೆಯರ ವೇಷ ಗಮನ ಸೆಳೆಯಿತು.
ಶಿಕ್ಷಕ ವೃಂದವು ಶಾಲೆಯ ಅಲಂಕೃತ ವೇದಿಕೆಯಲ್ಲಿ ಶ್ರೀಕೃಷ್ಣ, ರಾಧೆ, ರುಕ್ಮೀಣಿಯರನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿತು.
ಶ್ರೀ ಕೃಷ್ಣನ ಕುರಿತಾದ ಗೀತೆಗಳ ಗಾಯನ, ಶ್ಲೋಕ ಪಠಣ, ಕೃಷ್ಣ-ರಾಧೆಯ ಕುರಿತ ವಿವಿಧ ಭಕ್ತಿಗೀತೆಗಳಿಗೆ ಮಕ್ಕಳು ನೃತ್ಯ ಮಾಡಿ ಸಂಭ್ರಮಿಸಿದರು. ಶ್ರೀಕೃಷ್ಣ ಹಾಗೂ ರಾಧೆಯ ಮಾದಿಯ ಉಡುಗೆ ತೊಟ್ಟು ಆಗಮಿಸಿದ್ದ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳ ತಾಯಂದಿರು ನೃತ್ಯ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ಕೃಷ್ಣ ಜನ್ಮಾಷ್ಟಮಿಯಂದು ಪುಟಾಣಿ ಮಕ್ಕಳಿಗೆ ಕೃಷ್ಣ, ರಾಧೆಯರ ವೇಷ ತೊಡಿಸಿ ಆನಂದ ಪಡುವ ಪಾಲಕರ ಸಂಭ್ರಮ ಹೇಳತೀರದು. ಹಬ್ಬಗಳು ಭಾರತೀಯ ಸಂಸ್ಕೃತಿಯ ಪರಂಪರೆಯ ಪ್ರತೀಕವಾಗಿದ್ದು, ಪುರಾಣದಲ್ಲಿ ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ಶಿಕ್ಷಿಸುವ ಕೃಷ್ಣನು ಸರ್ವರಿಗೂ ಪ್ರೀತಿ ಪಾತ್ರನಾಗಿದ್ದಾನೆ. ಅದರಂತೆ ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವ ಬೆಳೆಸಿ ಸರ್ವರ ಪ್ರೀತಿಗೆ ಪಾತ್ರರಾಗುವಂತೆ ಮಾಡಬೇಕಿದೆ ಎಂದು ವಿಶಾಲ್ ಆಂಗ್ಲ ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಟಿ.ಕೆ.ನರಸೇಗೌಡ ಹೇಳಿದರು.
ಮಡೆಕೆ ಒಡೆದ ಮಕ್ಕಳು: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶಾಲೆ ಆವರಣದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ ಬೆಣ್ಣೆ ಮಡಕೆ ಕಟ್ಟಿ ಒಡೆಯುವ ಕಾರ್ಯಕ್ರಮದಲ್ಲಿ ಕೃಷ್ಣವೇಷಧಾರಿ ಮಕ್ಕಳು ಮಡಕೆ ಒಡೆದು ಆನಂದಿಸಿದರು. ನಂತರ ಶಾಲೆಯಿಂದ ಪ್ರಸಾದ ವಿತರಣೆ ಮಾಡಲಾಯಿತು.
ಶಿಕ್ಷಕರಾದ ಶಿವಕುಮಾರ್, ರಾಮಕೃಷ್ಣಯ್ಯ, ಆರ್.ಶೀಲಾ, ಪ್ರೀಯಾಂಕಾ, ಕೆ.ಆಶಾ, ಜ್ಯೋತಿನಾಯಕ್, ಶೋಭಾ, ಇಂದಿರಾ, ಮಂಜುಳಾ, ಲಕ್ಷ್ಮೀಕುಮಾರಿ, ಸ್ಟೇಲಾಮೇರಿ, ಜಯಲಕ್ಷ್ಮೀ, ಭಾಗ್ಯಾ, ಸುಜಾತಾ, ದಿಲ್‌ಶಾದ್‌ಬೇಗಾಂ ಇದ್ದರು.