

ನೆಲಮಂಗಲ: ರಾಜ್ಯರಾಜಧಾನಿ ಬೆಂಗಳೂರಿನ ಹೆಬ್ಬಾಗಿಲಾಗಿರುವ ನೆಲಮಂಗಲ ತಾಲೂಕು ಸಾಕಷ್ಟು ಐತಿಹಾಸಿಕ ಹಾಗೂ ಪೌರಾಣಿಕ ಇತಿಹಾಸ ಹೊಂದಿದೆ ಎಂದು ಸಮ್ಮೇಳನಾಧ್ಯಕ್ಷ ಶ್ರೀ ರಮಾನಂದನಾಥ ಸ್ವಾಮೀಜಿ ಹೇಳಿದರು.
ಯಂಟಗಾನಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಕಸಾಪದಿಂದ ಆಯೋಜಿಸಿದ್ದ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ದಕ್ಷಿಣಕಾಶಿ ಶಿವಗಂಗೆ, ಸಿದ್ಧರಬೆಟ್ಟ, ಗಂಗರ ರಾಜಧಾನಿ ಮಾನ್ಯಪುರ ಮಣ್ಣೆ ಸೇರಿ ರಾಜ ಮನೆತನಗಳನ್ನು ಹೊಂದಿದೆ. ತಾಲೂಕಿನಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಹಲವಾರು ಜನ ಕೊಡುಗೆ ನೀಡಿದ್ದಾರೆ. ತಾಲೂಕಿನಲ್ಲಿ ಸುಸಜ್ಜಿತ ರಂಗ ಮಂದಿರ ಇಲದಿರುವುದು ಬೇಸರದ ಸಂಗತಿ. ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಂಗ ಮಂದಿರ ಅವಶ್ಯಕತೆ ಇದೆ. ಆದ್ದರಿಂದ ಮುಂದಿನ ದಿನಗಳಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದರು.
ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಪಟ್ಟಣದಲ್ಲಿ ಸುಸಜ್ಜಿತ ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ 5 ಗುಂಟೆ ಜಮೀನು ಮಂಜೂರು ಹಾಗೂ ಅನುದಾನ ಬಿಡುಗಡೆಗೆ ಶ್ರಮಿಸುತ್ತೇನೆ. ರಾಜ್ಯದ ಜನರಿಗೆ ಭಾಷಾಭಿಮಾನ ಹಾಗೂ ಕನ್ನಡದ ಬಗ್ಗೆ ಅರಿವು ಹಾಗೂ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ರಾಜ್ಯಾದ್ಯಂತ ಕನ್ನಡ ಜ್ಯೋತಿಯಾತ್ರೆ ಹಮ್ಮಿಕೊಂಡಿದೆ. ಜತೆಗೆ ವಿಧಾನ ಸೌಧನ ಮುಂಭಾಗದಲ್ಲಿ ತಾಯಿ ಭುವನೇಶ್ವರಿ ದೇವಿ ಪುತ್ಥಳಿ ನಿರ್ಮಿಸಿದ ಕೀರ್ತಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಕನ್ನಡಪರ ಕಾರ್ಯಗಳಿಗೆ ಸರ್ಕಾರದ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕನ್ನಡ ಭಾಷೆ ಗೌರವಿಸಿದಾಗ ಮಾತ್ರ ಭಾಷೆ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.
ಬಿಇಒ ರಮೇಶ್, ಕಸಾಪ ಕೋಶಾಧ್ಯಕ್ಷ ಎಂ.ನಾರಾಯಣ್ ಗೌಡ, ಜಿಲ್ಲಾ ಮಹಿಳಾ ಪತ್ರಿನಿಧಿ ಮಂಜುಳಾ ಸಿದ್ದರಾಜು, ನಗರ ಅಧ್ಯಕ್ಷ ಮಲ್ಲೇಶ್, ತಾಲೂಕು ಪ್ರತಿನಿಧಿ ಸಿ.ಎಚ್,ಸಿದ್ಧಯ್ಯ, ಬೂದಿಹಾಲ್ ಕಿಟ್ಟಿ, ಕಲಾವತಿ, ಶಿವಲಿಂಗಯ್ಯ, ಉದ್ಯಮಿ ಭವಾನಿಶಂಕರ್ ಮಂಜುನಾಥ್, ಚಿಕ್ಕಹನುಮೇಗೌಡ, ಗ್ರಾಪಂ ಅಧ್ಯಕ್ಷ ರಾಹುಲ್ ಗೌಡ, ಮಾಜಿ ಅಧ್ಯಕ್ಷೆ ಲಕ್ಷ್ಮಮ್ಮಮುನಿರಾಜು, ಸದಸ್ಯ ಮಂಜುನಾಥಯ್ಯ, ಗಂಗಾಮಣಿ, ಗೀತಾ, ವಕೀಲ ಅನ್ನದಾನಯ್ಯ, ಮುಖಂಡ ಹೇಮಂತ್ ಕುಮಾರ್, ಬಿ.ಕೆ.ತಿಮ್ಮರಾಜು, ಟಿ.ನಾಗರಾಜು, ಸಿ.ಎಂ.ಗೌಡ, ಎಂ.ಕೆ.ನಾಗರಾಜು, ಚಿಕ್ಕಣ್ಣ, ಬೂದಿಹಾಲ್ ಮಧು, ನಾಗರತ್ನಮ್ಮ, ಜಯರಾಮ್ ಇದ್ದರು.
ರಾಜ್ಯ ಸರ್ಕಾರ ವಿಧಾನಸೌದ ಬಳಿ ಕನ್ನಡ ಪುಸ್ತಕ ಮೇಳ ಆಯೋಜನೆ ಸೇರಿ ಸಾಕಷ್ಟು ಮೈಲಿಗಲ್ಲುಗಳನ್ನು ಹಾಕಿದೆ. ಜತೆಗೆ ರಾಜ್ಯದಲ್ಲಿ ಉತ್ಪಾದನೆಯಾಗುವ ವಸ್ತುಗಳ ಮೇಲೆ ಕನ್ನಡ ಭಾಷೆಯನ್ನು ಕಡ್ಡಾಯ ಬಳಕೆ ಮಾಡುವಂತಹ ಮಹತ್ವ ಯೋಜನೆ ಜಾರಿಗೊಳಿಸಿದೆ. ಅನ್ಯ ಭಾಷೆ ವ್ಯಾಮೋಹಕ್ಕೆ ಒಳಗಾಗಿ ತಾಯಿ ಭಾಷೆ ಸಂರಕ್ಷಿಸಿದೆ. - ಪ್ರೊ.ಬಿ.ಎನ್.ಕೃಷ್ಣಪ್ಪ ಕಸಾಪ ಜಿಲ್ಲಾಧ್ಯಕ್ಷ
ಮಳಿಗೆ ಉದ್ಘಾಟನೆ, ಗೋಷ್ಠಿ ಪುಸ್ತಕ, ವಾಣಿಜ್ಯ ಮಳಿಗೆಗಳನ್ನು ಸಮ್ಮೇಳನಾಧ್ಯಕ್ಷ ಹಾಗೂ ಶ್ರೀ ಗಣ್ಯರು ಉದ್ಘಾಟಿಸಿದರು. ಬಿಜಿಎಸ್ ಆಸ್ಪತ್ರೆಯಿಂದ ವಿವಿಧ ಅರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಸಾಕಷ್ಟು ಜನ ಶಿಬಿರದ ಪ್ರಯೋಜನ ಪಡೆದುಕೊಂಡರು. ಜಾನಪದ ಮತ್ತು ಕನ್ನಡ ಸಾಹಿತ್ಯ ಕುರಿತು ವಿಜಯ ಸಂಜೆ ಕಾಲೇಜು ಉಪ ಪ್ರಾಂಶುಪಾಲ ಶಾಂತರಾಜು, ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಕುರಿತು ಶಿಕ್ಷಣ ಸಂಯೋಜಕಿ ಸುಚಿತ್ರಾ ವಿಚಾರ ಮಂಡಿಸಿದ್ದರು. ಧ್ವಜಾರೋಹಣ, ಮೆರವಣಿಗೆ ಯಂಟಗಾನಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಸಮ್ಮೇಳನ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜಾರೋಹಣವನ್ನು ಗ್ರಾಪಂ ಅಧ್ಯಕ್ಷ ಎಚ್.ಎ.ರಾಹುಲ್ ಗೌಡ, ತಹಸೀಲ್ದಾರ್ ಅಮೃತ್ ಆತ್ರೇಶ್ ಬೆಳಗ್ಗೆ 8 ಗಂಟೆಗೆ ನೆರವೇಸಿದರು. ಬಳಿಕ ಶ್ರೀ ಗೂಬೆಕಲ್ಲಮ್ಮ ದೇವಾಲಯದಿಂದ ಸಮ್ಮೇಳನಾಧ್ಯಕ್ಷ ಶ್ರೀರಮಣಾನಂದನಾಥ ಸ್ವಾಮೀಜಿ ಅವರನ್ನು ಬೆಳ್ಳಿ ರಥದಲ್ಲಿ ನಗರದ ಮುಖ್ಯರಸ್ತೆಯಲ್ಲಿ ವಿವಿಧ ಜಾನಪದ ಕಲಾ ಪ್ರಕಾರಗಳೊಂದಿಗೆ ವೇದಿಕೆಗೆ ಕರೆತರಲಾಯಿತು. ಖ್ಯಾತ ಜಾನಪದ ಗಾಯಕ ಚಿಕ್ಕಮಾರನಹಳ್ಳಿ ಸಿದ್ದಯ್ಯ ಅವರಿಂದ ಗೀತಗಾಯನ ನಡೆಯಿತು.