ಸಾಮಾಜಿಕ ಮೌಲ್ಯ ಕುಸಿತ ; ನಿವೃತ್ತ ನ್ಯಾಯಮೂರ್ತಿ ಡಾ.ಎನ್.ಸಂತೋಷ್‌ಹೆಗ್ಡೆ ಅಭಿಮತ

24 Nela Ph 01 Udgatane
Published on

ನೆಲಮಂಗಲ : ಸಾಮಾಜಿಕ ಮೌಲ್ಯಗಳ ಕುಸಿತದಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಡಾ.ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ನಗರದ ದಾನೋಜಿಪಾಳ್ಯ ಬಳಿಯ ಪುಷ್ಪಬೈರೇಗೌಡ ಕನ್ವೆಕ್ಷನ್ ಹಾಲ್‌ನಲ್ಲಿ ಗುರುವಾರ ಹೊಯ್ಸಳ ಪದವಿ ಪೂರ್ವ ಕಾಲೇಜಿನಿಂದ ಆಯೋಜಿಸಿದ್ದ ಸಮಾಲೋಚನಾ ಸಮಾರಂಭ ಹಾಗೂ ಕಲಾ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶಕ್ಕೆ ಸ್ವತಂತ್ರ ದೊರೆತ ದಿನಗಳಲ್ಲಿ ಜನಪ್ರತಿನಿಧಿಗಳಲ್ಲಿದ್ದ ಸಾಮಾಜಿಕ ಕಳಕಳಿ, ಮೌಲ್ಯಗಳು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಇಲ್ಲ. ಆದ್ದರಿಂದ ನಿಜವಾದ ಪ್ರಜಾಪ್ರಭುತ್ವ ಕಟ್ಟಬೇಕಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ವ್ಯಕ್ತಿಗಳನ್ನು ದೂರದೆ ಸಮಾಜವನ್ನು ದೂರುತ್ತಿದ್ದೇವೆ. ಸಮಾಜವನ್ನು ಬದಲಾಯಿಸುವ ಜವಾಬ್ದಾರಿ ಪ್ರತಿ ಪಾಲಕರ ಮೇಲಿದೆ ಎಂದರು.

ಮುಂದಿನ ಪೀಳಿಗೆ ನೆಮ್ಮದಿಯಿಂದ ಬಾಳಬೇಕಾದರೆ ದುರಾಸೆ ತೊರೆದು ತೃಪ್ತಿಯ ಮೌಲ್ಯ, ಮಾನವೀಯತೆ ಬೆಳೆಸಿಕೊಳ್ಳಬೇಕು. ಇಂದಿನ ಶಿಕ್ಷಣ ಕೇವಲ ಮಾಹಿತಿ ಆಧಾರಿತವಾಗಿದೆ, ಮತ್ತೊಂದೆಡೆ ಸಂಪಾದನೆಯಷ್ಟೇ ಜೀವನ ಎಂದು ತಿಳಿದಿರುವ ಪಾಲಕರಿಗೆ ಮಕ್ಕಳ ಬಗ್ಗೆ ಗಮನಹರಿಸಲು ಸಮಯವಿಲ್ಲವಾಗಿದೆ. ಬಾಲ್ಯದಲ್ಲೇ ನೈತಿಕ ಪಾಠ ಹೇಳಿಕೊಡಬೇಕಿದೆ ಎಂದರು.

ಕಾನೂನು ಚೌಕಟ್ಟಿನಲ್ಲಿ ಸಂಪತ್ತು ಗಳಿಸಿ ಶ್ರೀಮಂತನಾಗುವುದರಲ್ಲಿ ತಪ್ಪಿಲ್ಲ. ಇಲ್ಲವಾದಲ್ಲಿ ಐಟಿ, ಇಡಿ ಅಧಿಕಾರಿಗಳ ಭಯದಿಂದ ನಿದ್ದೆಗೆಡಬೇಕಾಗುತ್ತದೆ. ಮನೆಯಲ್ಲಿ ಸಿಗದ ಮೌಲ್ಯಗಳು ಶಿಕ್ಷಣ ಸಂಸ್ಥೆಗಳಿಂದ ದೊರೆಯುವಂತಾಗಬೇಕು. ಶಿಕ್ಷಣ ಇಲಾಖೆಯ ಪಠ್ಯಕ್ರಮದ ಜತೆಗೆ ವಾರಕ್ಕೆ ಕನಿಷ್ಠ 1 ಗಂಟೆ ನೈತಿಕ ಮೌಲ್ಯ ಶಿಕ್ಷಣ ಕೊಟ್ಟಲ್ಲಿ ಮೌಲ್ಯಧಾರಿತ ಸಮಾಜ ಕಟ್ಟಬಹುದಾಗಿದೆ ಎಂದರು.

ಹೊಯ್ಸಳ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ವಿ.ಗೌರಿಶಂಕರ್, ಉಪಪ್ರಾಂಶುಪಾಲ ಎಚ್.ಆರ್.ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

ಮೌಲ್ಯಗಳಿಗೆ ಬೆಲೆಕೊಡಿ: ಈ ಹಿಂದೆ ಜೈಲಿಗೆ ಹೋದವರಿಗೆ ಮನ್ನಣೆ ನೀಡಲಾಗುತ್ತಿರಲಿಲ್ಲ. ಆದರೆ ಈಗ ಜೈಲಿನಲ್ಲಿದ್ದು ಜಾಮೀನು ಪಡೆದು ಬಂದವರಿಗೆ ಹಾರ ಹಾಕಿ ಸಂಭ್ರಮದಿಂದ ಸ್ವಾಗತಿಸಲಾಗುತ್ತಿದೆ. ಇದರಿಂದ ಸಮಾಜಕ್ಕೆ ಯಾವ ಸಂದೇಶ ಹೋಗಲಿದೆ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದು ಸಂತೋಷ್‌ಹೆಗ್ಡೆ ತಿಳಿಸಿದರು.

ಜನಪ್ರಿಯತೆ ಪಡೆದುಕೊಂಡಿದ್ದರೆ ಯಾವುದೇ ತಪ್ಪು ಮಾಡಿದರೂ ಪರವಾಗಿಲ್ಲ ಎಂಬಂತಾಗಿದೆ. ಅಧಿಕಾರ, ಶ್ರೀಮಂತಿಕೆಗೆ ಬೆಲೆ ಕೊಡುವ ಬದಲು ಮೌಲ್ಯಗಳಿಗೆ ಬೆಲೆ ಕೊಡಬೇಕಿದೆ. ಯಾರಿಗೆ ಗೌರವ ಸಲ್ಲಬಾರದೆಂಬುದನ್ನು ಜನತೆ ತೀರ್ಮಾನಿಸಬೇಕು. ಪ್ರಸ್ತುತ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕಿದೆ. ಆದರೆ ಅದು ನನ್ನ ಕಾಲದಲ್ಲಿ ಸಾಧ್ಯವಿಲ್ಲ ಎನ್ನುವುದು ಗೊತ್ತಿದೆ. ಆದರೆ ನನ್ನ ಪ್ರಯತ್ನ ಬಿಡುವುದಿಲ್ಲ, ಶಾಲಾ ಕಾಲೇಜು ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಸಣ್ಣ ಬದಲಾವಣೆ ತರುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಜನರ ಭಾವನೆಗೆ ಧಕ್ಕೆ ಸಲ್ಲ ; ಧರ್ಮ ಮತ್ತು ಭಾಷೆಯನ್ನು ಎಲ್ಲಿ ಬಳಕೆ ಮಾಡಬೇಕೊ ಅಲ್ಲಿ ಬಳಸಬೇಕು. ಪ್ರತಿಯೊಬ್ಬರೂ ಅವರ ಧರ್ಮವನ್ನು ನಂಬಿದ್ದಾರೆ. ಅವರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಬಾರದು. ಹಿಜಾಬ್ ವಿಚಾರವಾಗಿ ಕೋರ್ಟ್‌ನಲ್ಲಿ ತೀರ್ಪು ನೀಡಿದ್ದು, ಅದನ್ನು ಪ್ರಶ್ನಿಸಿ ಮೇಲಿನ ಕೋರ್ಟಿಗೆ ಮನವಿ ಸಲ್ಲಿಸಬಹುದು. ಅದನ್ನು ಬಿಟ್ಟು ಬಂದ್ ಮಾಡುವುದು ಸರಿಯಲ್ಲ. ನ್ಯಾಯಾಲಯದ ಮಾತಿಗೆ ಪ್ರತಿಯೊಬ್ಬರೂ ಬೆಲೆ ಕೊಡಬೇಕು ಎಂದು ಸಂತೋಷ್ ಹೆಗ್ಡೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net