

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಗಿಡಮರ ಬೆಳೆಸಿದರೆ ಮಾಲಿನ್ಯಮುಕ್ತ ಪರಿಸರ ನಿರ್ಮಾಣವಾಗಲಿದೆ ಎಂದು ರೋಟರಿ ಅಧ್ಯಕ್ಷ ಎಂ.ಟಿ.ನವೀನ್‌ಕುಮಾರ್ ತಿಳಿಸಿದರು.
ತಾಲೂಕಿನ ಸೋಲದೇವನಹಳ್ಳಿ ಗ್ರಾಪಂನ ಹಂದಿಗುಟ್ಟೆ ಸರ್ಕಾರಿ ಶಾಲಾ ಆವರಣದಲ್ಲಿ ರೋಟರಿ ಸಂಸ್ಥೆಯಿಂದ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆಧುನಿಕ ದಿನಗಳಲ್ಲಿ ನವ ನಾಗರಿಕನಾಗಿ ಬೆಳೆಯುತ್ತಿರುವ ಮನುಷ್ಯನಿಗೆ ಪರಿಸರ ಮಾಲಿನ್ಯಗಳ ಅರಿವಿಲ್ಲದಂತಾಗಿದೆ. ಮಿತಿಮೀರಿ ಬಳಕೆ ಮಾಡುತ್ತಿರುವ ಪ್ಲಾಸ್ಟಿಕ್ ಜೀವಸಂಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ನಗರಿಕರಣದಿಂದಾಗಿ ಅರಣ್ಯಸಂಪತ್ತು ಕಡಿಮೆಯಾಗುತ್ತಿದೆ. ಮಾಲಿನ್ಯ ಹೆಚ್ಚಾಗಿ ಜಾಗತಿಕ ತಾಪಮಾನವೂ ಹೆಚ್ಚಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಪರಿಸರ ಮಾಲಿನ್ಯ ಕಡಿಮೆ ಮಾಡದ ಹೊರತು ಜೀವಸಂಕುಲಕ್ಕೆ ಉಳಿಗಾಲವಿಲ್ಲ. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡುವ ಕಾರ್ಯದಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ರೋಟರಿ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಹರೀಶ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬರ ಆರೋಗ್ಯ ಮತ್ತು ಜೀವನಕ್ಕೆ ಪರಿಶುದ್ಧವಾದ ಗಾಳಿಯ ಅಗತ್ಯ ಇದೆ. ತಾಪಮಾನದ ಏರಿಕೆ, ಜನಸಂಖ್ಯಾ ಸ್ಫೋಟವೇ ಪರಿಸರ ನಾಶಕ್ಕೆ ಪ್ರಮುಖ ಕಾರಣ. ಆದ್ದರಿಂದ ಸಸಿ ನೆಡುವ ಮೂಲಕ ಪರಿಸರ ಕಾಪಾಡಬೇಕು ಎಂದರು.
ಸರ್ಕಾರಿ ಶಾಲಾ ಅವರಣದಲ್ಲಿ ರೋಟರಿ ನಿರ್ದೇಶಕ ಸಿದ್ದರಾಜು ನೇತೃತ್ವದಲ್ಲಿ ಕಿತ್ತಳೆ, ಮೂಸಂಬಿ, ತೆಂಗಿನಗಿಡ, ನೆಲ್ಲಿಕಾಯಿ, ಮಾವು, ಹಲಸು ಸೇರಿ 30 ವಿವಿಧ 100ಕ್ಕೂ ಹೆಚ್ಚು ಹಣ್ಣಿನ ಗಿಡ ನೆಡಲಾಯಿತು.
ಮಾಜಿ ಅಧ್ಯಕ್ಷ ಕೆ.ಮಂಜುನಾಥ್, ವಿ.ಆರ್.ಸ್ವಾಮಿ, ನಿರ್ದೇಶಕ ಸಿದ್ಧರಾಜು, ಇನ್ನರ್‌ವೀಲ್ ಮಾಜಿ ಅಧ್ಯಕ್ಷೆ ಸರ್ವಮಂಗಳಾ, ಲತಾ ಶಂಕರಪ್ಪ, ಮುಖ್ಯಶಿಕ್ಷಕಿ ಜಯಶ್ರೀ, ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಇತರರು ಇದ್ದರು.