ಬೆಳೆ ನಷ್ಟ, ಜಾನುವಾರು ಮೇವಿಗೂ ತತ್ವಾರ

rain probem
Published on

ನೆಲಮಂಗಲ ವ್ಯಾಪ್ತಿಯಲ್ಲಿ ಬರಗಾಲದ ಛಾಯೆ

ಮಳೆ ಇಲ್ಲದೆ ಒಣಗಿವೆ ಪೈರು


ವಿಜಯವಾಣಿ ಸುದ್ದಿಜಾಲ ನೆಲಮಂಗಲ/ದಾಬಸ್‌ಪೇಟೆ
ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ನೆಲಮಂಗಲ ತಾಲೂಕು ವ್ಯಾಪ್ತಿಯಲ್ಲಿ ರಾಗಿ, ಜೋಳ ಮತ್ತಿತರ ಮಳೆಯಾಶ್ರಿತ ಬೆಳೆ ನಷ್ಟವಾಗುತ್ತಿದ್ದು, ಜಾನುವಾರುಗಳ ಮೇವಿಗೂ ಸಂಕಷ್ಟ ಎದುರಿಸುವಂತಾಗಿದೆ.
ತಾಲೂಕಿನಲ್ಲಿ ರಾಗಿ ಪ್ರಮುಖ ಬೆಳೆಯಾಗಿದೆ. ಅದರ ಜತೆಗೆ ಉಪ ಬೆಳೆಗಳಾಗಿ ತೊಗರಿ, ಅವರೆ, ಅಲಸಂದೆ, ಮೆಕ್ಕೆಜೋಳ, ನೆಲಗಡಲೆ ಮತ್ತು ಹುರುಳಿ ಬೆಳೆಯಲಾಗುತ್ತದೆ. ಈ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಮಳೆಯಿಲ್ಲದೆ ಬಿತ್ತನೆ ಹಂತದಲ್ಲಿ ಕೃಷಿ ಚಟುವಟಿಕೆಗಳು ಮಕಾಡೆ ಮಲಗಿವೆ.
ಸಾವಿರಾರು ರೂಪಾಯಿ ಬಂಡವಾಳ ಹೂಡಿ ಬೇಸಾಯ ಮಾಡಿರುವ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನಡುವೆ ಜಾನುವಾರುಗಳ ಮೇವಿಗೂ ಕೊರತೆ ಎದುರಾಗಿದ್ದು, ಹೈನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪ್ರಸಕ್ತ ವರ್ಷದ ಮುಂಗಾರಿನಿಂದ ಇಲ್ಲಿಯವರೆಗೆ ನೆಲಮಂಗಲ ತಾಲೂಕಿನಲ್ಲಿ 230 ಎಂಎಂ ಮಳೆಯಾಗಿದ್ದು ವಾಡಿಕೆಯ ಶೇ. 66 ಮಳೆಯಾಗಿದೆ. ಶೇ.34 ಮಳೆ ಕೊರತೆ ಕಂಡುಬಂದಿದೆ. ಕಳೆದ ವರ್ಷದಲ್ಲಿ ಮುಂಗಾರಿನಿಂದ ಇಲ್ಲಿಯವರೆಗೆ 636 ಎಂಎಂ ಮಳೆಯಾಗಿತ್ತು. ವಾಡಿಕೆಗಿಂತ ಶೇ. 50 ಮಳೆಯಾಗಿದ್ದರಿಂದ ಕಳೆದ ವರ್ಷ ಬೆಳೆ ಸಮೃದ್ಧಿಯಾಗಿತ್ತು. ಈ ಬಾರಿ ಇದಕ್ಕೆ ವಿರುದ್ಧವಾದ ವಾತಾವರಣ ಸೃಷ್ಟಿಯಾಗಿದೆ.

ಬರಪೀಡಿತ ತಾಲೂಕಾಗಿ ನೆಲಮಂಗಲ! ಜುಲೈ ತಿಂಗಳ ಕೊನೇ ವಾರದಲ್ಲಿ ಬಿತ್ತನೆಯಾದ ರಾಗಿ ಮಳೆ ಇಲ್ಲದೆ ಮೊಳಕೆಯಲ್ಲಿಯೇ ಸೊರಗಿದೆ. ಸರ್ಕಾರ ಮೊದಲ ಹಂತದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲೂಕುಗಳನ್ನು ಬರ ಕ್ಷೇತ್ರ ಎಂದು ಘೋಷಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಾರದಲ್ಲಿ ನೆಲಮಂಗಲ ತಾಲೂಕಿನಲ್ಲಿಯೂ ಮಳೆ ಕೊರತೆ ಉಂಟಾದರೆ ನೆಲಮಂಗಲ ತಾಲೂಕು ಸಹ ಬರ ಘೋಷಣೆಗೆ ಎರಡನೇ ಹಂತದಲ್ಲಿ ಆಯ್ಕೆಯಾಗುವ ಸಂಭವವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೇ.40ರಷ್ಟು ಬೆಳೆ ನಷ್ಟ: ನೆಲಮಂಗಲ ತಾಲೂಕಿನಲ್ಲಿ ಮಳೆ ಕೊರತೆ ಹೀಗೆ ಮುಂದುವರಿದರೆ ಎಲ್ಲ ಬೆಳೆಗಳ ಫಸಲಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಶೇ. 40 ಬೆಳೆ ನಷ್ಟ ಅಂದಾಜಿಸಬಹುದಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ವಿಮೆಗೆ ಆಸಕ್ತಿ ತೋರಿದ ರೈತರು: ತಾಲೂಕಿನಲ್ಲಿ ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಿ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಅತಿ ಹೆಚ್ಚು ರೈತರಲ್ಲಿ ರೈತರನ್ನು ಬೆಳೆ ವಿಮೆ ಯೋಜನೆಗೆ ನೋಂದಾಯಿಸಲಾಗಿದೆ. ಕಳೆದ ಸಾಲಿನಲ್ಲಿ ತಾಲೂಕಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ಕೇವಲ 190 ರೈತರು ನೋಂದಾಯಿಸಿದ್ದರು. ಆದರೆ ಈ ಸಾಲಿನಲ್ಲಿ 2,196 ರೈತರು ನೋಂದಾಯಿಸಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net