

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರದ ರಾಷ್ಟ್ರೀಯ ಹೆದ್ದಾರಿ 48ರ ದಾನೋಜಿಪಾಳ್ಯ ಬಳಿ ಆ.6ರಂದು ವ್ಯಕ್ತಿಯ ಅನುಮಾನಾಸ್ಪದ ಸಾವು ಪ್ರಕರಣ ಭೇದಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಲತಃ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚಿ ಗ್ರಾಮದ ನಿವಾಸಿ, ದೊಡ್ಡಬಳ್ಳಾಪುರದ ಬಸವೇಶ್ವರ ಬಡಾವಣೆಯಲ್ಲಿ ವಾಸವಿದ್ದ ಸಂತೋಷ್‌ಕುಮಾರ್ (32) ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕುಟುಂಬದವರು ಕೊಲೆ ಶಂಕೆ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು. ಪ್ರರಕಣ ಬೆನ್ನತ್ತಿದ ಪೊಲೀಸರ ತನಿಖೆಯಲ್ಲಿ ಸಂತೋಷ್‌ಕುಮಾರ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂಬುದು ದೃಢಪಟ್ಟಿದೆ.
ಅಪರಿಚಿತ ಶವ ಪತ್ತೆಯಾಗಿತ್ತು:
ಆ.6ರಂದು ದಾನೋಜಿಪಾಳ್ಯ ಬಳಿ ಚರಂಡಿಯಲ್ಲ್ಲಿ ಅಪರಿಚಿತ ವ್ಯಕ್ತಿ ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಗರ ಠಾಣೆ ಆರಕ್ಷಕ ನಿರೀಕ್ಷಕ ಶಶಿಧರ್ ತಂಡ ಪರಿಶೀಲನೆ ನಡೆಸಿದ ವೇಳೆ ಮೃತನ ಧರಿಸಿದ್ದ ಶರ್ಟ್ ಜೇಬಿನಲ್ಲಿದ್ದ ಚೀಟಿಯಲ್ಲಿದ್ದ ಪೋನ್ ನಂಬರ್ ಮೂಲಕ ಸಂಬಂಧಿಕರನ್ನು ಪತ್ತೆ ಮಾಡಲಾಗಿತ್ತು.
ಕುಡಿದ ಮತ್ತಿನಲ್ಲಿ ಅಪಘಾತ!
ಬೆಂಗಳೂರು ಮೂಲದ ನಾಲ್ವರು ಸ್ನೇಹಿತರು ಹೆದ್ದಾರಿ ಡಾಬಾದಲ್ಲಿ ಮದ್ಯ ಸೇವಿಸಿ ಅಲ್ಲಿಂದ ಸೊಂಡೆಕೊಪ್ಪ ಮಾರ್ಗವಾಗಿ ಸರ್ವೀಸ್ ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದರು. ಈ ವೇಳೆ ಸಲೀಂ ಎಂಬುವರ ಕಾರಿಗೆ ಗುದ್ದಿ ಬಳಿಕ ಅಲ್ಲೆ ಸಂಚರಿಸುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದರು. ಇದೇ ವೇಳೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಂತೋಷ್ ಕುಮಾರ್ ಮೇಲೆ ಕಾರು ಹರಿಸಿದ್ದರು. ಬಳಿಕ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ಪಲ್ಟಿಯಾಗಿತ್ತು. ಅಪಘಾತದಲ್ಲಿ ಆಟೋ ಪ್ರಯಾಣಿಕರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ತಲೆಗೆ ತೀವ್ರ ಪೆಟ್ಟು ಬಿದ್ದದ್ದ ಸಂತೋಷ್ ಕೊನೆಯುಸಿರೆಳೆದಿದ್ದ.
ಪತ್ತೆಯಾಗಿರಲಿಲ್ಲ: ಅಪಘಾತದಲ್ಲಿ ಚರಂಡಿಗೆ ಬಿದ್ದ ಸಂತೋಷ್ ಪ್ರಜ್ಞಾಹೀನನಾಗಿದ್ದ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಆಟೋ ಹಾಗೂ ಕಾರಿನಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿದ್ದರು. ಆದರೆ ಈ ವೇಳೆ ಚರಂಡಿಯಲ್ಲಿ ಬಿದ್ದಿದ್ದ ಸಂತೋಷ್ ಪೊಲೀಸರ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ.
ಆರೋಪಿಗಳ ಬಂಧನ: ಬೆಂಗಳೂರು ಲಗ್ಗೆರೆ ನಿವಾಸಿ ಮಂಜುನಾಥ್(31), ಸ್ನೇಹಿತರಾದ ನಿತಿನ್(25) ಚಂದನ್ ಕುಮಾರ್,(28) ಶರಣ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಪಾದಚಾರಿ ಸಾವಿಗೆ ಕಾರಣವಾಗಿ, ಆಟೋ ಪ್ರಯಾಣಿಕರನ್ನು ಗಾಯಗೊಳಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ನಡೆದುಕೊಂಡ ಬಂದವನ ಮೇಲೆರಗಿದ ಸಾವು: ಸಂತೋಷ್‌ಕುಮಾರ್ ದೊಡ್ಡಬಳ್ಳಾಪುರದಲ್ಲಿ ಚಾಟ್ಸ್ ಅಂಗಡಿ ನಡೆಸುತ್ತಿದ್ದ. ವಾರದ ಹಿಂದೆ ಪತ್ನಿಯೊಂದಿಗೆ ನಂಜನಗೂಡಿಗೆ ತೆರಳಿ ವಾಪಸ್ ಬರುವಾಗ ಪತ್ನಿಯನ್ನು ಚಿಕ್ಕಚಾಗಹಳ್ಳಿಯ ತವರುಮನೆಯಲ್ಲಿ ಬಿಟ್ಟು, ಚನ್ನರಾಯಪಟ್ಟಣದಲ್ಲಿ ಕಾರನ್ನು ಅಡವಿಟ್ಟು ಹಣ ಪಡೆದು ದೊಡ್ಡಬಳ್ಳಾಪುರಕ್ಕೆ ತೆರಳಲು ಸೊಂಡೆಕೊಪ್ಪ ವೃತ್ತದ ಕಡೆಗೆ ನಡೆದುಕೊಂಡು ಬರುವಾಗ ಅಪಘಾತ ಸಂಭವಿಸಿದೆ.