

ಮಂಡ್ಯ: ಪ್ರಸ್ತುತ ಸತ್ಯಕ್ಕೆ ಸಾಕ್ಷೃ ಕೇಳುವ ಕಾಲಘಟ್ಟದಲ್ಲಿ ಇದ್ದೇವೆ. ಈ ಕಾಲದಲ್ಲಿ ಎಚ್.ಹೊನ್ನಪ್ಪ ಅವರು ಸ್ವಾಭಿಮಾನಿಯಾಗಿ ಕಾಣುತ್ತಾರೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಕರ್ನಾಟಕ ಸಂಘ, ಇಂಡುವಾಳು ಎಚ್.ಹೊನ್ನಯ್ಯ ಕುಟುಂಬ ವರ್ಗದ ಸಹಯೋಗದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಇಂಡುವಾಳು ಎಚ್.ಹೊನ್ನಪ್ಪ ಅವರನ್ನು ಕುರಿತ ನೆಲದ ಕಣ್ಣು ಕೃತಿ ಬಿಡುಗಡೆ ಹಾಗೂ ಎಚ್.ಹೊನ್ನಪ್ಪ ಕ್ರೀಡಾ ಪ್ರಶಸ್ತಿ ಪ್ರದಾನ ಹಾಗೂ ಇಂಡುವಾಳು ಎಚ್.ಹೊನ್ನಪ್ಪ ಸೇವಾ ಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊನ್ನಪ್ಪ ಅವರು ನನಗೂ ಪರಿಚಯ. ಜೀವನದಲ್ಲಿ ಒಂದನ್ನು ಗೆಲ್ಲಬೇಕು, ಒಂದನ್ನ ಬಿಡಬೇಕು ಹಾಗೂ ಇನ್ನೊಂದನ್ನ ಹಂಚಬೇಕು. ಯಾವುದನ್ನು ಗೆಲ್ಲಬೇಕು ಇಲ್ಲಿ ಜನರ ಹೃದಯವನ್ನು ಗೆಲ್ಲಬೇಕು ಅದನ್ನು ಅವರು ಮಾಡಿದ್ದಾರೆ. ಯಾವುದನ್ನು ಬಿಡಬೇಕು ಎಂದರೆ ದ್ವೇಷ, ಅಸೂಯೆ ಬಿಡಬೇಕು. ಪ್ರೀತಿಯನ್ನು ಹಂಚಬೇಕು ಎನ್ನುವುದು ಹೊನ್ನಪ್ಪ ಅವರಿಗೆ ಸಲ್ಲುತ್ತದೆ.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮತ್ತು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿದರು. ಸಮಾರಂಭದ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ವಿಶ್ರಾಂತ ಪ್ರಾಂಶುಪಾಲ ಎಸ್.ಬಿ.ಶಂಕರಗೌಡ, ಕೃತಿ ಕರ್ತೃ ಎಂ.ಎಸ್.ಅನಿತಾ, ಡಾ.ಎಚ್.ಆದರ್ಶ್ ಹೊನ್ನಪ್ಪ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಫುಟ್‌ಬಾಲ್ ಆಟಗಾರ ಬಿ.ವೆಂಕಟ್ ಅವರಿಗೆ ಎಚ್.ಹೊನ್ನಪ್ಪ ಕ್ರೀಡಾ ಪ್ರಶಸ್ತಿಯನ್ನು ನೀಡಲಾಯಿತು.