

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮ ಪಂಚಾಯಿತಿಯ ಆದರ್ಶನಗರ ಪರಿಸರದಲ್ಲಿ ಭೂಮಿಯಡಿ ಆಗಾಗ ಭಾರಿ ನಿಗೂಢ ಶಬ್ದ ಕೇಳಿ ಬರುತ್ತಿದ್ದು, ಜನರು ಆತಂಕಗೊಂಡಿದ್ದಾರೆ.
ಪುತ್ತೂರು- ಉಪ್ಪಿನಂಗಡಿ ನಡುವಣ ರಾಜ್ಯ ರಸ್ತೆಯ ಅಡ್ಡಲಾಗಿ ಭೂಮಿಯಡಿ ಈ ಶಬ್ದ ಕೇಳಿಬರುತ್ತಿದ್ದು, ಟಿಪ್ಪರ್‌ನಿಂದ ದೊಡ್ಡ ದೊಡ್ಡ ಬಂಡೆಗಳನ್ನು ಸುರಿದಂತೆ 20ರಿಂದ 30 ಸೆಕೆಂಡ್ ಸದ್ದು ಕೇಳುತ್ತಿದೆ. ದಿನಕ್ಕೆ ನಾಲ್ಕೈದು ಬಾರಿ ಹೀಗಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು. ಮೆಸ್ಕಾಂ ಪವರ್‌ಮ್ಯಾನ್‌ಗಳೂ ಇದೇ ರೀತಿಯ ಅನುಭವವನ್ನು ಹೇಳಿಕೊಂಡಿದ್ದಾರೆ.
ಈ ಶಬ್ದ ಹಿಂದಿನಿಂದಲೂ ಯಾವಾಗಾದರೂ ಒಮ್ಮೆ ಕೇಳಿ ಬರುತ್ತಿತ್ತು. ಆಗ ನಾವು ಅಷ್ಟಾಗಿ ಗಮನಿಸಿರಲಿಲ್ಲ. ಆದರೆ ಈಗ ದಿನಕ್ಕೆ ನಾಲ್ಕೈದು ಬಾರಿಯಾದರೂ ಜೋರಾಗಿ ಕೇಳಿ ಬರುತ್ತಿದೆ. ಮೊದಮೊದಲು ನಾನು ನಮ್ಮ ಮನೆ ಬಳಿ ಮಾತ್ರ ಈ ಶಬ್ದ ಬರುತ್ತದೆ ಎಂದು ಅಂದಾಜಿಸಿದ್ದೆ. ಈಗ ನೋಡುವಾಗ ಸುತ್ತಮುತ್ತಲಿನ ಪರಿಸರದವರಿಗೂ ಈ ಶಬ್ದದ ಅನುಭವಗಳಾಗಿವೆ ಎಂದು ಸ್ಥಳೀಯ ನಿವಾಸಿ ಪ್ರಭಾಕರ್ ನಾಯಕ್ ಮಾಹಿತಿ ನೀಡಿದ್ದಾರೆ.
ಪರಿಸರದಲ್ಲಿನ ಭೂಮಿಯ ಒಳಪದರದಲ್ಲಿ ಯಾವುದೋ ಬೆಳವಣಿಗೆ ನಡೆಯುತ್ತಿರಬಹುದು. ಬಹಳಷ್ಟು ವರ್ಷಗಳ ಹಿಂದೆ ಶಿಲೆಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಈ ಪ್ರದೇಶದಲ್ಲಿ ಸದ್ಯ ಭೂಗರ್ಭದಲ್ಲಿ ಶಿಲಾ ಪದರಗಳ ಚಲನೆಯಿಂದಾಗಿ ಈ ಶಬ್ದಗಳು ಕೇಳಿಸುತ್ತಿರಬಹುದು ಎಂದು ಹಿರಿಯರು ಅಭಿಪ್ರಾಯ ಪಡುತ್ತಿದ್ದಾರೆ.
ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಎರಡು ಕಡೆ ಭೂಮಿಯ ಆಳದಲ್ಲಿ ಬಿಸಿನೀರಿನ(ಜ್ವಾಲಾಮುಖಿ ರೀತಿ) ಬುಗ್ಗೆ ಇದೆ. ಒಂದು ಉಪ್ಪಿನಂಗಡಿ ಸಮೀಪದ ಬಂದಾರು, ಇನ್ನೊಂದು ಬೆಟ್ಟಂಪಾಡಿಯ ಇರ್ದೆಯಲ್ಲಿ. ಈ ಬುಗ್ಗೆ ಇರುವಲ್ಲಿ ಭೂಮಿಯ ಮೇಲ್ಪದರವರೆಗೂ ಆಳವಾದ ಬಿರುಕು ಹೊಂದಿರುತ್ತದೆ. ಆಳದ ಸ್ತರದಲ್ಲಿ ಈ ಬಿಸಿನೀರಿನ ಬುಗ್ಗೆ ಸಂಚಲನವಾಗುತ್ತಿದ್ದಲ್ಲಿ ಸುತ್ತಮುತ್ತಲ ಪರಿಸರದಲ್ಲಿ ಈ ರೀತಿ ಶಬ್ದ ಸಾಮಾನ್ಯ. ಇದು ಭೂಮಿಯ ಒಳಪದರದಲ್ಲಿ ಸಂಭವಿಸುವ ಸಾಮಾನ್ಯ ನೈಸರ್ಗಿಕ ಪ್ರಕ್ರಿಯೆ, ಜನರು ಆತಂಕಪಡುವ ಅಗತ್ಯ ಇಲ್ಲ.
- ಡಾ.ಉದಯ ಶಂಕರ್, ಭೂಗರ್ಭ ಶಾಸ್ತ್ರಜ್ಞ, ಉಡುಪಿ