

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವ ಸಲುವಾಗಿ ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಏ.21ರಂದು ನೇಕಾರರ ಸಮಾವೇಶ ಆಯೋಜಿಸಲಾಗಿದೆ ಎಂದು ಬಿಜೆಪಿ ನೇಕಾರ ಪ್ರಕೋಷ್ಠದ ರಾಜ್ಯ ಸಂಚಾಲಕ ಬಿ.ಎಸ್.ಸೋಮಶೇಖರ್ ಹೇಳಿದರು.
ಬೆಳಗ್ಗೆ 10.30ಕ್ಕೆ ಆರಂಭವಾಗುವ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಮೈಸೂರು ಭಾಗದ ನಾಲ್ಕು ಕ್ಷೇತ್ರದ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಜಿಲ್ಲೆಯ ನೇಕಾರರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಂದು ಕಪ್ಪುಚುಕ್ಕೆ ಬರದಂತೆ ಹತ್ತು ವರ್ಷ ಆಡಳಿತ ನಡೆಸಿದ್ದಾರೆ. ಇನ್ನು ಸಮುದಾಯಕ್ಕೆ ಸಂಬಂಧಿಸಿದಂತೆ ನೇಕಾರ ವೃತ್ತಿಯನ್ನು ಗುರುತಿಸಿ 2015 ಆ.7ರಂದು ಕೈಮಗ್ಗ ದಿನಾಚರಣೆ ಘೋಷಣೆ ಮಾಡಿರುವುದು ಸೇರಿದಂತೆ ಅನೇಕ ನೇಕಾರ ವೃತ್ತಿಯು ಅಭಿವೃದ್ಧಿ ಪತದತ್ತ ಸಾಗಲು ಮಹತ್ತರ ಪಾತ್ರ ವಹಿಸಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನೇಕಾರರ ಸಾಲಮನ್ನಾ ಮತ್ತು ಸಮ್ಮಾನ್ ಯೋಜನೆ ಅಡಿ ನೆರವು ಹಾಗೂ ದೇವರ ದಾಸಿಮಯ್ಯ ಜಯಂತಿ ಘೋಷಣೆ ಮಾಡಿದ್ದರು. ಬಸವರಾಜ ಬೊಮ್ಮಾಯಿ ಅವರು ನೇಕಾರರ ಅಭಿವೃದ್ಧಿ ನಿಗಮ ಘೋಷಣೆ ಮಾಡುವ ಮೂಲಕ ಪ್ರತಿ ಜಿಲ್ಲೆಯಲ್ಲಿ ಟೆಕ್ಸ್‌ಟೈಲ್ಸ್ ಪಾರ್ಕ್‌ಗಳನ್ನು ತೆರೆಯಲು ಆದೇಶ ಮಾಡಿದ್ದರು ಎಂದು ವಿವರಿಸಿದರು.
ನೇಕಾರ ಪ್ರಕೋಷ್ಠದ ಹರೀಶ್‌ಕುಮಾರ್, ಜಿ.ರಮೇಶ್, ಲೋಕೇಶ್, ಗೋವಿಂದರಾಜು, ಶ್ರೀನಿವಾಸ್ ಇದ್ದರು.