

ಕುಶಾಲನಗರ:
ಕರ್ನಾಟಕ ರಾಜ್ಯ ನೇಕಾರ ಸಮುದಾಯ ಒಕ್ಕೂಟದ ವತಿಯಿಂದ ರಾಜ್ಯದ 31 ಜಿಲ್ಲೆಗಳು ಮತ್ತು 224 ವಿಧಾನಸಭಾ ಕ್ಷೇತ್ರಗಳಲ್ಲೂ ನೇಕಾರ ಸಮುದಾಯ ದ ನಿಖರ ಮಾಹಿತಿ ತಿಳಿಯಲು ಪ್ರತ್ಯೇಕವಾಗಿ ಜಾತಿ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ಎಸ್. ಸೋಮಶೇಖರ್ ಹೇಳಿದರು. ಕುಶಾಲನಗರದಲ್ಲಿ ಬುಧವಾರ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಾಂತರಾಜು ನೇತೃತ್ವದ ಶಾಶ್ವತ ಆಯೋಗ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿರುವ ಜಾತಿ ಗಣತಿ ವರದಿಯನ್ನು ನೇಕಾರ ಸಮುದಾಯ ಸ್ವಾಗತಿಸುತ್ತದೆ. ಆದರೆ ರಾಜ್ಯದಲ್ಲಿರುವ ನೇಕಾರ ಸಮುದಾಯಗಳ ಜನಸಂಖ್ಯೆಯನ್ನು ದಾಖಲಿಸುವಲ್ಲಿ ಆಯೋಗ ಕೈಗೊಂಡಿರುವ ಕ್ರಮ ಅವೈಜ್ಞಾನಿಕವಾಗಿದೆ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
2014-15ನೇ ಸಾಲಿನಲ್ಲಿ ಆಯೋಗ ಕೈಗೊಂಡ ಸಮೀಕ್ಷೆ ಪ್ರಕಾರ 9.30 ಲಕ್ಷ ಎಂದು ವರದಿ ನೀಡಿದ್ದಾರೆ. ಆದರೆ ರಾಜ್ಯದ 224 ಕ್ಷೇತ್ರಗಳಲ್ಲಿ ನೇಕಾರ ಸಮುದಾಯ 55 ಲಕ್ಷ ಜನಸಂಖ್ಯೆ ಇದೆ. ಆಯೋಗ ಸಲ್ಲಿಸಿದ ವರದಿ ತಪ್ಪಾಗಿದೆ. ಈ ಹಿನ್ನೆಲೆಯಲ್ಲಿ ನೇಕಾರ ಸಮುದಾಯ ನಿಖರ ಜನಸಂಖ್ಯೆ ತಿಳಿದು ದಾಖಲಿಸುವ ಮೂಲಕ ಸರ್ಕಾರಕ್ಕೆ ಒಕ್ಕೂಟದಿಂದ ವರದಿ ಸಲ್ಲಿಸಲಾಗುತ್ತದೆ.
ನೇಕಾರ ಸಮುದಾಯಗಳ ಮಠಾದೀಶರು, ರಾಜಕೀಯ ಮುಖಂಡರು, ಸಮಾಜದ ಗಣ್ಯರುಗಳು ಸುಮಾರು ಐದಾರು ಸಭೆಗಳನ್ನು ನಡೆಸಿ ಮರು ಸಮೀಕ್ಷೆಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮರು ಜಾತಿ ಗಣತಿ ಸಮೀಕ್ಷೆ ನಡೆಸಲು ನಿರ್ಧರಿಸಿರುವ ಕ್ರಮವನ್ನು ನೇಕಾರ ಒಕ್ಕೂಟ ಸ್ವಾಗತಿಸುತ್ತದೆ. ಇದಕ್ಕೂ ಮೊದಲು ನೇಕಾರ ಒಕ್ಕೂಟದ ವತಿಯಿಂದ ಪ್ರತಿ ಹಳ್ಳಿ, ಹೋಬಳಿ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕವಾದ ಆ್ಯಪ್ ಹಾಗೂ ಅರ್ಜಿ ನಮೂನೆ ಕೂಡ ಸಿದ್ಧಪಡಿಸಲಾಗಿದೆ.
ನೇಕಾರ ಸಮುದಾಯವು ತನ್ನ ಸಮುದಾಯದ ನಿಖರ ಜನಸಂಖ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ತನ್ನದೇ ಆದ ಆ್ಯಪ್ ಸಿದ್ದಪಡಿಸಿದೆ. ಈ ಆ್ಯಪ್ ಮೂಲಕ ರಾಜ್ಯದಲ್ಲಿರುವ ನೇಕಾರರು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರುಗಳ ಮಾಹಿತಿಯನ್ನು ಒದಗಿಸಲು ಅನುಕೂಲ ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟವು ಜಿಲ್ಲಾವಾರು ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಮುದಾಯದವರ ಜಾತಿಗಣತಿ ಸಮೀಕ್ಷೆಯನ್ನು ನಡೆಸಲಿದ್ದು, ಸ್ಥಳೀಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮೂಲಕ ನೇಕಾರರನ್ನು ಸಂಪರ್ಕಿಸಿ ಕುಟುಂಬ ಸದಸ್ಯರುಗಳ ಅಂಕಿ ಅಂಶಗಳನ್ನು ಸಂಗ್ರಹಿಸಿ ಆ್ಯಪ್‌ನಲ್ಲಿ ಅವುಗಳನ್ನು ದಾಖಲಿಸಲಾಗುವುದು ಎಂದರು.
ಕೊಡಗು ಜಿಲ್ಲಾ ನೇಕಾರ ಸಂಘದ ಅಧ್ಯಕ್ಷ ಟಿ.ಕೆ. ಪಾಂಡುರAಗ ಮಾತನಾಡಿ, ಕೊಡಗು ಜಿಲ್ಲೆಯಲ್ಲಿರುವ ದೇವಾಂಗ, ಕುರುಹಿನ ಶೆಟ್ಟಿ, ತಮಿಳುದೇವಾಂಗ, ಪಟ್ಟಸಾಲಿ ಸಮಾಜ ಮತ್ತಿತರರು ತಮ್ಮ ಮಾಹಿತಿಯನ್ನು ಜಿಲ್ಲಾ ಸಮಿತಿಗೆ ನೀಡಬೇಕು. ರಾಜ್ಯ ಸಮಿತಿ ಆದೇಶದ ಮೇರೆ ಜಿಲ್ಲಾ ಹಾಗೂ ತಾಲೂಕು, ಹೋಬಳಿ ಸಮಿತಿಯ ಪದಾಧಿಕಾರಿಗಳು ತಮ್ಮ ಮನೆಗಳಿಗೆ ಭೇಟಿ ನೀಡಿದ ಸಂದರ್ಭ ತಮ್ಮ ಕುಟುಂಬ ವರ್ಗದ ಸಂಪೂರ್ಣ ಮಾಹಿತಿಯನ್ನು ನೀಡುವ ಮೂಲಕ ಜಾತಿಗಣತಿ ಸಮೀಕ್ಷೆಗೆ ಸಹಕಾರ ನೀಡಬೇಕು ಎಂದರು.
ಕರ್ನಾಟಕ ರಾಜ್ಯ ನೇಕಾರ ಸಮುದಾಯ ಒಕ್ಕೂಟದ ಉಪಾಧ್ಯಕ್ಷ ಎನ್.ಜಗದೀಶ್, ಪ್ರಧಾನ ಕಾರ್ಯದರ್ಶಿ ಶಿವಪ್ಪಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಉಮಾಜಗದೀಶ್, ಮುಖಂಡರಾದ ದಯಾನಂದ ಶೆಟ್ಟಿ, ಡಿ.ಕೆ.ತಿಮ್ಮಪ್ಪ, ಡಿ. ವಿ. ರಾಜೇಶ್, ಡಿ.ವಿ .ಜಗದೀಶ್, ರಾಜೇಶ್, ಟಿ.ವಿ. ಪ್ರಕಾಶ್, ಗಜಾನನ, ರಮೇಶ್, ರಾಮಪ್ರಸಾದ್, ಪದ್ಮಮಹೇಶ್ ಇದ್ದರು.