ಶಂಕಿತರಿಗೂ ಸಾಯಿ ಪ್ರಸಾದ್‌ಗೂ ಇಲ್ಲ ಕ್ರೈಂ ನಂಟು

nia
Published on

ಶಿವಮೊಗ್ಗ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಶಂಕಿತನ ಪರಿಚಯಸ್ಥರು ಎನ್ನುವ ಕಾರಣಕ್ಕೆ ತೀರ್ಥಹಳ್ಳಿ ಬಿಜೆಪಿ ನಗರ ಯುವ ಘಟಕದ ಕಾರ್ಯದರ್ಶಿ ಸಾಯಿ ಪ್ರಸಾದ್ ಮತ್ತು ಆತನ ಸಹೋದರನಿಗೆ ನೋಟಿಸ್ ನೀಡಿದ್ದ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು ಶುಕ್ರವಾರ ವಿಚಾರಣೆ ನಡೆಸಿ ವಾಪಸ್ ಕಳಿಸಿದ್ದಾರೆ.

ಶಂಕಿತ ಭಯೋತ್ಪಾದಕ ಅಬ್ದುಲ್ ಮತೀನ್ ಕ್ರಿಪ್ಟೊ ಕರೆನ್ಸಿಯಲ್ಲಿ ಸಾಯಿ ಪಿಎ ಎಂಬ ಹೆಸರಿನ ಯೂಸರ್ ನೇಮ್ ಬಳಕೆ ಮಾಡಿಕೊಂಡಿದ್ದ. ಬಿಜೆಪಿ ಕಾರ್ಯಕರ್ತನ ಹೆಸರು ಸಾಯಿ ಪ್ರಸಾದ್ ಆಗಿದ್ದು ಅದೇ ಶಂಕೆ ಮೇಲೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಅರ್ಧ ದಿನ ವಿಚಾರಣೆಯಲ್ಲಿ ಶಂಕಿತರಿಗೂ ಸಾಯಿ ಪ್ರಸಾದ್ ಮತ್ತು ಆತನ ಸಹೋದರನಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾದ ಬಳಿಕ ಬಿಟ್ಟು ಕಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮಾ.27ರಂದು ತೀರ್ಥಹಳ್ಳಿ ಪಟ್ಟಣಕ್ಕೆ ಆಗಮಿಸಿ ಇಡೀ ದಿನ ಶೋಧ ನಡೆಸಿದ್ದ ಎನ್‌ಐಎ ಅಧಿಕಾರಿಗಳು, ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಶಂಕಿತರ ಜತೆ ಸಂಪರ್ಕದಲ್ಲಿದ್ದವರು ಹಾಗೂ ಅವರ ಕುಟುಂಬದ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಪಿಎಫ್‌ಐ ಸಂಘಟನೆಯಲ್ಲಿ ಭಾಗಿಯಾಗಿದ್ದ ಅನುಮಾನದ ಮೇಲೆ ಮೊಬೈಲ್ ಅಂಗಡಿ ಮಾಲೀಕ ಸಬೀಲ್ ಮನೆ ಮತ್ತು ಮೊಬೈಲ್ ಅಂಗಡಿ ಮೇಲೆ ದಾಳಿ ನಡೆಸಿ ಆತನ ಮೊಬೈಲ್ ವಶಕ್ಕೆ ಪಡೆದಿದ್ದರು.
ಪರಿಚಯಸ್ಥರಾಗಿದ್ದ ಸಬೀಲ್ ಅಂಗಡಿಯಲ್ಲಿ ಇತ್ತೀಚೆಗೆ ಸಾಯಿ ಪ್ರಸಾದ್ ಮೊಬೈಲ್ ಸಿಮ್ ಖರೀದಿ ಮಾಡಿದ್ದರು. ಅಲ್ಲದೆ ಆತನ ಮನೆಗೆ ಪೇಂಟ್ ಮಾಡಿದ್ದರು. ಹಲವು ಬಾರಿ ಮೊಬೈಲ್ ಮೂಲಕ ಸಂಭಾಷಣೆ ನಡೆಸಿದ್ದ ಅನುಮಾನದ ಮೇಲೆ ವಿಚಾರಣೆಗೆ ಹಾಜರಾಗುವಂತೆ ಸಾಯಿ ಪ್ರಸಾದ್ ಮತ್ತು ಆತನ ಸಹೋದರನಿಗೆ ಏ.4ರಂದು ನೋಟಿಸ್ ನೀಡಲಾಗಿತ್ತು. ಶುಕ್ರವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಎನ್‌ಐಎ ಅಧಿಕಾರಿಗಳಿಂದ ವಿಚಾರಣೆಗೆ ಒಳಪಟ್ಟರು.

ಮತಿನ್‌ಗೆ ಕ್ರಿಪ್ಟೊ ಕರೆನ್ಸಿ ನಂಟು
ಪ್ರಕರಣದಲ್ಲಿ ಪ್ರಮುಖ ಶಂಕಿತ ಭಯೋತ್ಪಾದಕ, ಬೆಟ್ಟಮಕ್ಕಿಯ ಅಬ್ದುಲ್ ಮತೀನ್‌ಗೆ ಕ್ರಿಪ್ಟೊ ಕರೆನ್ಸಿ ನಂಟಿದೆ ಎಂಬುದು ಬಿಜೆಪಿ ಕಾರ್ಯಕರ್ತನ ವಿಚಾರಣೆ ವೇಳೆ ಬಹಿರಂಗಗೊಂಡಿದೆ. ಸಾಯಿ ಪ್ರಸಾದ್‌ಗೆ ಮತಿನ್ ಕೂಡ ಪರಿಚಯಸ್ಥ. ಬಾಲ್ಯದಲ್ಲಿ ಒಟ್ಟಿಗೆ ಆಟ ಆಡುತ್ತಿದ್ದವರು. ಮತಿನ್ ಕ್ರಿಪ್ಟೊ ಕರೆನ್ಸಿ ಬಳಕೆ ಮಾಡುತ್ತಿದ್ದು ವಿದೇಶಗಳಿಂದ ಹಣ ಫಂಡಿಂಗ್ ಆಗುತ್ತಿತ್ತು ಎನ್ನುವುದಕ್ಕೆ ಪುಷ್ಟಿ ನೀಡಿದಂತಾಗಿದೆ.
2 ಖಾತೆಯಲ್ಲಿ ಹೂಡಿಕೆ
ಜೀವನೋಪಾಯಕ್ಕಾಗಿ ತೀರ್ಥಹಳ್ಳಿಯಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಸಾಯಿ ಪ್ರಸಾದ್, 2021ರಲ್ಲಿ ಕ್ರಿಪ್ಟೊ ಕರೆನ್ಸಿ ಬಳಕೆ ಮಾಡಿದ್ದರು. ಯೂಟ್ಯೂಬ್ ನೋಡಿ ಕ್ರಿಪ್ಟೊ ಕರೆನ್ಸಿ ಬೂಮ್ ಆಗಲಿದೆ ಎಂಬ ಉದ್ದೇಶದಿಂದ ಎರಡು ಖಾತೆ ತೆರೆದಿದ್ದ ಅವರು ಒಂದರಲ್ಲಿ 40 ಸಾವಿರ ರೂ., ಮತ್ತೊಂದರಲ್ಲಿ ತುಸು ಹಣ ಹೂಡಿಕೆ ಮಾಡಿದ್ದರು. ಆದರೆ ನಷ್ಟ ಹೊಂದಿದ ಕಾರಣ ಹೂಡಿಕೆ ಸ್ಥಗಿತಗೊಳಿಸಿದ್ದರು. ಎರಡೂ ಖಾತೆಗೆ ಆಧಾರ್ ಕಾರ್ಡ್ ಮೂಲಕ ಕೆವೈಸಿ ಮಾಡಿದ್ದರಿಂದ ಎನ್‌ಐಎ ಅಧಿಕಾರಿಗಳು ಸಾಕ್ಷಿಗೋಸ್ಕರ ವಿಚಾರಣೆಗೆ ಕರೆದಿದ್ದರು ಎಂಬುದನ್ನು ಸಾಯಿಪ್ರಸಾದ್ ಅವರೇ ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net