

ಮೈಸೂರು: ಕಾರ್ಮಿಕನಿಗೆ ಕಾಯಕವೇ ಬದುಕು. ಕಾಯಕವೆಂದರೆ ಕೇವಲ ವೃತ್ತಿ, ದುಡಿಮೆಯಲ್ಲ, ಅದು ಜೀವನದ ನಡೆ-ನುಡಿಯ ಸಿದ್ಧಾಂತವಾಗಿದೆ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿದರು.
ಮೈಸೂರು ಕನ್ನಡ ವೇದಿಕೆ ವತಿಯಿಂದ ನಗರದ ಸುಬ್ಬರಾಯನಕೆರೆ ಬಳಿ ಇರುವ ಸ್ವಾತಂತ್ರೃ ಹೋರಾಟಗಾರರ ಉದ್ಯಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾನತೆಯನ್ನು ಜೀವನದಲ್ಲಿ ಬೆಳೆಸಿಕೊಳ್ಳುವ ಮೂಲಕ ಕಾಯಕ ತತ್ವದಡಿ ಜೀವನ ನಡೆಸಬೇಕು. ಯಾವ ಕಾಯಕವೂ ಕೀಳಲ್ಲ, ಶ್ರೇಷ್ಠವೂ ಅಲ್ಲ. ಬದುಕು ಕಲ್ಪಿಸಿದ ಯಾವುದೇ ಕಾಯಕವಾದರೂ ಅದು ಉತ್ತಮ ವೃತ್ತಿಯಾಗಿರುತ್ತದೆ. ಕಾರ್ಮಿಕರನ್ನು ಗುರುತಿಸಿ ಗೌರವಿಸಬೇಕಿದೆ ಎಂದು ತಿಳಿಸಿದರು.
ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಮಾತನಾಡಿ, ಉದ್ಯೋಗ, ಸಮರ್ಪಕ ವೇತನ ಮತ್ತು ವೃತ್ತಿಗೆ ಉತ್ತಮ ಆದಾಯ ಸಿಗದೆ ಕಾರ್ಮಿಕರು ಕಷ್ಟ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಅಂತಹ ಕಾರ್ಮಿಕರನ್ನು ಗುರುತಿಸಿ ಸಬಲರಾಗಿ ಮಾಡಲು ಕಾರ್ಯಕ್ರಮ ರೂಪಿಸಬೇಕಾಗಿದೆ ಎಂದರು.
ಇಡೀ ದೇಶ ನಿಂತಿರುವುದೇ ಕಾರ್ಮಿಕರಿಂದ. ಕಾರ್ಮಿಕರಿಲ್ಲದೆ ಯಾವುದೇ ರಾಷ್ಟ್ರ ಪ್ರಗತಿ ಹೊಂದಲು ಸಾಧ್ಯವಿಲ್ಲ. ದುಡಿಮೆಗೆ ತಕ್ಕಷ್ಟು ವೇತನ ಕಾರ್ಮಿಕರಿಗೆ ದೊರೆಯಬೇಕು. ಆಗ ಮಾತ್ರ ಅವರು ಉತ್ತಮ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದರು..
ಚಟ್ಟ ಕಟ್ಟುವ ಪಾಪಯ್ಯ, ಗಾರೆ ಕೆಲಸದ ಮೇಸ್ತ್ರಿ ಜವರಪ್ಪ, ಮೆಕಾನಿಕ್ ಮಣಿಕಂಠ, ಪತ್ರಕರ್ತ ಎಂ.ಎಸ್.ಕಿರಣ್, ಸೈಕಲ್ ರಿಪೇರಿಯ ಎಂ.ಅಬ್ದುಲ್ ರಶೀದ್, ಸೌಂದರ್ಯ ತಜ್ಞೆ ಮಂಜುಳಾ, ಟೈಲರ್ ಎನ್.ಜೆ.ಹರೀಶ್, ಟೈಲ್ಸ್ ಕೆಲಸಗಾರ ಯೋಗೇಶ್ ಮತ್ತು ಬಡಗಿ ವೃತ್ತಿಯ ಸ್ವಾಮಿ ಆಚಾರಿ ಅವರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮೈಸೂರು ಕನ್ನಡ ವೇದಿಕೆ ಪದಾಧಿಕಾರಿಗಳಾದ ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್ ಬಾಬು, ಗೋಪಿ, ಬೀಡಾ ಬಾಬು, ಮದನ್, ಕಾವೇರಮ್ಮ, ಮಾಲಿನಿ, ಸಿದ್ದಪ್ಪ, ಭವಾನಿ ಸೇರಿದಂತೆ ಇನ್ನಿತರರಿದ್ದರು.