ಜಾತಿ, ವರ್ಗರಹಿತ ಸಮಾಜ ನಿರ್ಮಾಣ ಆಗಲಿ : ಸಚಿವ ಜೆ.ಸಿ.ಮಾಧುಸ್ವಾಮಿ

DSC_2282
Published on

ತುಮಕೂರು : ದೇಶದಲ್ಲಿ ಆರ್ಥಿಕ ಅಭಿವೃದ್ಧಿ ಸ್ವಲ್ಪ ಮಟ್ಟಿಗೆ ಆಗಿದೆಯಾದರೂ ಸಾಮಾಜಿಕವಾಗಿ ಸಮಾನ ಸ್ಥಾನಮಾನಗಳು ಎಲ್ಲರಿಗೂ ಸಿಕ್ಕಾಗ ಸ್ವಾತಂತ್ರೃ ದಿನಾಚರಣೆಗೆ ಅರ್ಥ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಶನಿವಾರ ಆಯೋಜಿಸಿದ್ದ 74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು. ಜಾತಿ, ವರ್ಗರಹಿತ ಸಮಾಜ ನಿರ್ಮಾಣವಾಗಬೇಕು, ಬಡವ, ಬಲ್ಲಿದ, ಮೇಲು, ಕೀಳು ಎಂಬ ಭಾವನೆ ಜನರಿಂದ ಇನ್ನೂ ದೂರವಾಗಿಲ್ಲ, ಹಣಕ್ಕೆ ಸಿಗುತ್ತಿರುವ ಗೌರವ ಶ್ರಮಕ್ಕೂ ಸಿಗಬೇಕು, ಈ ನಿಟ್ಟಿನಲ್ಲಿ ಇದುವರೆಗೂ ಆಡಳಿತ ನಡೆಸಿದ ಎಲ್ಲ ರಾಜಕೀಯ ಪಕ್ಷಗಳು ನಿರಂತರವಾಗಿ ಪ್ರಯತ್ನ ನಡೆಸಿವೆ, ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಲು ನಿರಂತರ ಪ್ರಯತ್ನ ನಡೆದಿದೆ ಎಂದರು.

ಹೇಮಾವತಿಯಿಂದ ಕೆರೆಗಳನ್ನು ತುಂಬಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ತೊಂದರೆಯಾಗಲಾರದು, ಎಲ್ಲ ಪಂಪ್‌ಸೆಟ್‌ಗಳಿಗೆ ಸೋಲಾರ್ ಅಳವಡಿಸುವ ಚಿಂತಿನೆ ಕೂಡ ಸರ್ಕಾರದ ಮುಂದಿದೆ ಎಂದು ಹೇಳಿದರು. ಅಟಲ್ ಭೂಜಲ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ರೂಪಿಸಿರುವ ಮಾದರಿಯು ರಾಷ್ಟ್ರಕ್ಕೆ ಮಾದರಿಯಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ವಿಶ್ವಬ್ಯಾಂಕ್ 2 ಬಾರಿ ರಾಜ್ಯವನ್ನು ಶ್ಲಾಘಿಸಿದೆ ಎಂದ ಅವರು, ಪ್ರಧಾನ ಮಂತ್ರಿಗಳ ಆಶಯದಂತೆ ಮನೆ-ಮನೆಗೆ ನೀರು ನೀಡುವ ಜಲಜೀವನ್ ಮಿಷನ್ ಮುಂದಿನ 3 ವರ್ಷಗಳಲ್ಲಿ ಅನುಷ್ಠಾನಗೊಂಡು, ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು

ದೊರೆಯಲಿದೆ ಎಂದು ತಿಳಿಸಿದರು.

ಶಾಸಕ ಜಿ.ಬಿ ಜ್ಯೋತಿಗಣೇಶ್, ವಿಧಾನಪರಿಷತ್ ಶಾಸಕ ಕಾಂತರಾಜು, ಜಿಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಶಾರದಾ, ಮೇಯರ್ ಫರಿದಾಬೇಗಂ, ಉಪಮೇಯರ್ ಶಶಿಕಲಾ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಪಂ ಸಿಇಒ ಶುಭಾ ಕಲ್ಯಾಣ್,

ಎಸ್‌ಪಿ ಡಾ.ವಂಶಿಕೃಷ್ಣ ಇದ್ದರು.

ಜಿಲ್ಲಾಡಳಿತದಿಂದ ಹಲವರಿಗೆ ಸನ್ಮಾನ: ಜಿಲ್ಲಾಸ್ಪತ್ರೆ ಅರಿವಳಿಕೆ ತಜ್ಞ ಡಾ.ಚಂದ್ರಶೇಖರ್, ಡಾ.ರಮ್ಯಾ, ಹೃದಯ ರೋಗ ತಜ್ಞ ಡಾ.ಯಶವಂತ್, ಶುಶ್ರೂಷಕಿ ಚಂದ್ರ, ಡಿ.ಗ್ರೂಪ್ ನೌಕರ ಮನೂಜ್, ಕುಣಿಗಲ್ ಠಾಣೆ ಸಿಎಚ್ ಸಿ.ನಟರಾಜು, ತುಮಕೂರು ಠಾಣೆ ರಂಗನಾಥ್, ಪೌರಕಾರ್ಮಿಕ ರಾಮಕೃಷ್ಣಪ್ಪ, ಜಗದೀಶ್, ಕ್ಷ ಕಿರಣ ತಜ್ಞೆ ನಳಿನಾ, ಕುಣಿಗಲ್ ತಾಲೂಕು ಹಂದಲಗೆರೆ ಅಂಗನವಾಡಿ ಕಾರ್ಯಕರ್ತೆ ಗುಲ್ಜಾರ್, ರೊಪ್ಪದ ಸುಶೀಲಮ್ಮ, ನಾಜೀಮಾಬಾನು, ಜೆ.ಅರ್.ಗೀತಾ, 108 ಚಾಲಕ ಪ್ರಭುದೇವ, ಸ್ಟ್ಾ ನರ್ಸ್ ರಂಗಪ್ಪ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.

ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಬಿ.ಪುಪ್ಪಲತಾ (ಶೇ.99.36), ಬಿ.ವೆಂಕಟೇಶ ಪ್ರಸನ್ನಕುಮಾರ್ (ಶೇ.98.88), ಡಿ.ಸಿಂಚನಾ (98.88) ಹಾಗೂ ಎಚ್.ಆರ್ ಪ್ರಿಯಾಂಕಾ (ಶೇ.98.40) ಹಾಗೂ ನರೇಗಾದಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿಗಳನ್ನು ಗೌರವಿಸಲಾಯಿತು.

ಗಲಭೆಕೋರರಿಗೆ ಪಾಠ ಕಲಿಸುವ ಸಾಮರ್ಥ್ಯ ಸರ್ಕಾರಕ್ಕಿದೆ ಬೆಂಗಳೂರಿನ ಗಲಭೆಕೋರರಿಗೆ ಪಾಠ ಕಲಿಸುವ ಸಾಮರ್ಥ್ಯ ಸರ್ಕಾರಕ್ಕಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಕೆ ನೀಡಿದರು. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿಯೇ ವಿಷಯ ಪ್ರಸ್ತಾಪಿಸಿದ ಅವರು, ಗಲಭೆಕೋರರ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳಲು ಈ ಹಿಂದೆಯೇ ಕಾನೂನು ರೂಪಿಸಲಾಗಿದ್ದು, ಅಮಾನುಷವಾಗಿ ವರ್ತಿಸಬಾರದು ಎಂದು ಇಷ್ಟು ದಿನ ಸರ್ಕಾರ ಸುಮ್ಮನಿರುವುದೇ ತಪ್ಪಾಗಿದೆ ಎಂಬ ಭಾವನೆ ಮೂಡಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರಕ್ಕೆ ಶಕ್ತಿ ಇಲ್ಲ, ಸಾಮರ್ಥ್ಯವಿಲ್ಲ ಎಂದು ಯಾರಾದರೂ ಭಾವಿಸಿದ್ದರೆ ಅದು ತಪ್ಪು, ಮುಂದಿನ ದಿನದಲ್ಲಿ ಸಿಎಂ ಜತೆ ಚರ್ಚಿಸಿ ಜಾರಿಯಲ್ಲಿರುವ ಕಾನೂನು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಯಾರೊ ಒಬ್ಬ ಕಿಡಿಗೇಡಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಮನಸ್ಸಿಗೆ ನೋವು ಮಾಡಿದೆ ಎಂಬ ಕಾರಣಕ್ಕೆ ಮತ್ತ್ಯಾರಿಗೊ ಅಥವಾ ಮತ್ತ್ಯಾರ ಮನೆಗೂ ಬೆಂಕಿ ಇಡಬಾರದು ಎಂದರು. ಜನ ಒಪ್ಪಿದರೆ ಅಧಿಕಾರದಲ್ಲಿ ಇರುತ್ತೇವೆ, ವಿರೋಧ ಪಕ್ಷಗಳು ದೊಡ್ಡತನ ತೋರದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಪೆಟ್ಟು ನೀಡಲಿದೆ, ಜನ ನಮ್ಮನ್ನು ನೋಡುತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net