

ಬೆಂಗಳೂರು: ಅಪ್ರಾಪ್ತ ವಯಸ್ಸಿನವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ತಲಘಟ್ಟಪುರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ವೇಣುಗೋಪಾಲ್ ಬಂಧಿತ (22) ಆರೋಪಿ. ತಲಘಟ್ಟಪುರದಲ್ಲಿ ಸಂತ್ರಸ್ತೆಯ ಕುಟುಂಬ ಮತ್ತು ಆರೋಪಿ ಕುಟುಂಬ ಅಕ್ಕಪಕ್ಕ ಮನೆಯಲ್ಲಿ ವಾಸವಾಗಿದ್ದು, ಯಾದಗಿರಿ ಮೂಲದ ಇಬ್ಬರ ಪಾಲಕರು ಜೀವನಕ್ಕಾಗಿ ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅಪ್ರಾಪ್ತ ವಯಸ್ಕಳಿಗೆ ಪರಿಚಯವಿದ್ದ ಆರೋಪಿ ಸೋಮವಾರ ರಾತ್ರಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಲಘಟ್ಟಪುರದಲ್ಲಿ ಸೋಮವಾರ ರಾತ್ರಿ ಹೊಯ್ಸಳ ಸಿಬ್ಬಂದಿ ಗಸ್ತು ತಿರುಗುವ ವೇಳೆ ಇಬ್ಬರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮಿಸಿದ್ದಾರೆ. ರಾತ್ರಿ ಸುಮಾರು 3-4 ಗಂಟೆಯ ವೇಳೆ ನಿರ್ಜನ ಪ್ರದೇಶದಲ್ಲಿದ್ದ ಅವರನ್ನು ಕರೆದು ವಿಚಾರಣೆ ನಡೆಸಿದ್ದಾಗ ಅನುಮಾನ ಬರುವ ರೀತಿ ನಡೆದುಕೊಂಡಿದ್ದು, ಹೀಗಾಗಿ ಅವರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾಗ ಆರೋಪಿ ನಿಜಾಂಶವನ್ನು ಬಾಯ್ಬಿಟ್ಟಿದ್ದಾನೆ.
ಈ ಸಂಬಂಧ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಕೊಂಡಿದ್ದಾರೆ.