

ಬಣಕಲ್: ಮೇಗೂರು, ಹೆಸಗೋಡು, ಮಲೆಮನೆ, ಆಲೇಕಾನ್ ಹೊರಟ್ಟಿ, ಬಿದಿರುತಳ ಭಾಗದಲ್ಲಿ ಕಾಡಾನೆ ದಾಳಿಯಿಂದ ಕಾಫಿ, ಅಡಕೆ, ಕಾಳುಮೆಣಸಿನ ಬಳ್ಳಿ ಹಾಳಾಗಿವೆ.
ಈ ಭಾಗದ ರೈತರು ಅತಿವೃಷ್ಟಿ, ನೆರೆ ಪ್ರವಾಹದಿಂದ ತೊಂದರೆ ಅನುಭವಿಸಿ ಮತ್ತೆ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅತಿಯಾದ ಮಳೆಯಿಂದ ಬೆಳೆಹಾನಿಯಾಗಿ ಉಳಿದ ಬೆಳೆಗಳನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವಾಗಲೇ ಕಾಡಾನೆ ಹಾವಳಿ ಮಿತಿ ಮೀರಿ ಉಳಿದ ಬೆಳೆಯೂ ಕೈಗೆ ಸಿಗದಂತಾಗಿದೆ ಎಂದು ಮೇಗೂರು ಗ್ರಾಮಸ್ಥ ಸುಧೀರ್ ಹೇಳಿದ್ದಾರೆ.
ಕಾಡಾನೆ ಹಾವಳಿ ಹೆಚ್ಚಾದಾಗ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾಡಾನೆಗಳನ್ನು ಕಾಡಿಗೆ ಓಡಿಸುತ್ತಾರೆ. ಆದರೆ ಕಾಡಾನೆಗಳು ಮತ್ತೆ ಕೆಲ ದಿನಗಳಲ್ಲಿ ನಾಡಿನತ್ತ ಮುಖ ಮಾಡುತ್ತವೆ. ಆದ್ದರಿಂದ ಕಾಡಾನೆಗಳನ್ನು ಸ್ಥಳಾಂತಿಸುವುದು ಸೇರಿದಂತೆ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಸುಧೀರ್, ಜಯಂತ್, ನರೇಂದ್ರಗೌಡ, ಸುನೀಲ್, ದಿಲೀಪ್, ಸುರೇಶ್, ಬಿದಿರುತಳ ಸತೀಶ್, ಹೆಸಗೂಡಿನ ರಾಹುಲ್ ಒತ್ತಾಯಿಸಿದ್ದಾರೆ.