ನೆರೆಯ ರಾಜ್ಯ ಆಂಧ್ರಕ್ಕೆ ಹರಿದ ಟಿಬಿ ಡ್ಯಾಮ್‌ ನೀರು

07082020 Bellari TB Dam
Published on

ವೀರೇಂದ್ರ ನಾಗಲದಿನ್ನಿ ಹೊಸಪೇಟೆ
ಮುಂಗಾರು ಕೊರತೆ ಮಧ್ಯೆಯೂ ಇತ್ತೀಚೆಗೆ ಮಲೆನಾಡು ಮತ್ತು ಜಲಾನಯನ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಡಿಬಿ ಡ್ಯಾಮ್ ಅರ್ಧಕ್ಕಿಂತ ಹೆಚ್ಚು ತುಂಬಿದೆ. ಹೀಗಾಗಿ ಶುಕ್ರವಾರದಿಂದ ಆಂಧ್ರ ಭಾಗದ ಕಾಲುವೆಗಳಿಗೆ ನೀರು ಹರಿಯುತ್ತಿದ್ದು, ಕರ್ನಾಟಕ ಭಾಗಕ್ಕೆ ನೀರು ಹರಿಸದಿರುವುದು ರೈತರ ಬೇಸರಕ್ಕೆ ಕಾರಣವಾಗಿದೆ.
ಬಿರು ಬಿಸಿಲು ಹಾಗೂ ಮುಂಗಾರು ವಿಳಂಬದಿಂದಾಗಿ ಬರಿದಾಗಿದ್ದ ತುಂಗಭದ್ರಾ ಜಲಾಶಯಕ್ಕೆ ಈಗ ಜೀವಕಳೆ ಬಂದಿದೆ. ಮಲೆನಾಡು ಮತ್ತು ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಡ್ಯಾಮ್‌ಗೆ ಗಣನೀಯವಾಗಿ ಒಳ ಹರಿವು ದಾಖಲಾಗಿದೆ. ದಿನೇದಿನೆ ನೀರಿನ ಮಟ್ಟ ಹೆಚ್ಚುತ್ತಿದ್ದು, ಜಲಾಶಯ ಶೇ.60 ಭರ್ತಿಯಾಗಿದೆ. ಆಂಧ್ರ ಸರ್ಕಾರದ ಬೇಡಿಕೆ ಸಲ್ಲಿಸಿದ್ದರಿಂದ ಶುಕ್ರವಾರದಿಂದ ಆ ಭಾಗಕ್ಕೆ ಸಾಗುವ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ.

ಇದನ್ನೂ ಓದಿ: ಹಂಪಿ ವೀಕ್ಷಿಸಿದ ಬ್ರಿಗೇಡಿಯರ್, ವಿಶ್ವ ಪಾರಂಪರಿಕ ತಾಣ ಕಂಡು ಸಂತಸ
ಬೆಳೆ ಒಣಗುವ ಆತಂಕ: ಜಲಾಶಯದ ನೀರಿನ ಲಭ್ಯತೆ ನಿರೀಕ್ಷೆಯಲ್ಲಿ ಅಚ್ಚುಟ್ಟು ಪ್ರದೇಶದ ಕೊಪ್ಪಳ, ವಿಜಯನಗರ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹರಿಯುವ ಎಚ್‌ಎಲ್‌ಸಿ, ಎಲ್‌ಎಸಿ ಹಾಗೂ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಹಾಗೂ ವಿಜಯನಗರ ಕಾಲುವೆಗಳ ವ್ಯಾಪ್ತಿಯ ಸುಮಾರು 9.10 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಭತ್ತ, ಬಾಳೆ, ಕಬ್ಬು, ಮೆಕ್ಕೆಜೋಳ, ಮೆಣಸಿನಕಾಯಿ, ಜೋಳ, ಹತ್ತಿ ಮತ್ತಿತರ ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ಬಾರಿ ಮುಂಗಾರು ವಿಳಂಬವಾಗಿದೆ. ಕಳೆದೊಂದು ವಾರದಿಂದ ಜಿಟಿಜಿಟಿ ಮಳೆಯಾಗುತ್ತಿದ್ದರೂ, ನೀರಾವರಿ ಬೆಳೆಗಳಿಗೆ ಅದು ಸಾಕಾಗುತ್ತಿಲ್ಲ. ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಈ ಭಾಗದ ರೈತರ ಒತ್ತಾಯವಾಗಿದೆ.

ರಚನೆಯಾಗದ ಐಸಿಸಿ: ತುಂಗಭದ್ರ ಜಲಾಶಯ ಮೂರು ರಾಜ್ಯಗಳಗೆ ಸಂಬಂಧಿಸಿದ್ದರೂ, ಕರ್ನಾಟಕ ಸರ್ಕಾರದಿಂದ ನೀರಾವರಿ ಸಲಹಾ ಸಮಿತಿ ರಚಿಸಲಾಗುತ್ತದೆ. ರಾಜ್ಯದ ನಾಲ್ಕು ಜಿಲ್ಲೆಯ ಶಾಸಕರು, ಸಂಸದರು ಹಾಗೂ ಸಚಿವರನ್ನು ಒಳಗೊಂಡ ಸಮಿತಿಯಲ್ಲಿ ಜಲಾಶಯದ ನೀರಿನ ಲಭ್ಯತೆ ಆಧರಿಸಿ, ಆಯಾ ರಾಜ್ಯಗಳ ಬೇಡಿಕೆಯಂತೆ ಹಂಚಿಕೆ ಪ್ರಮಾಣ ನಿರ್ಧರಿಸಲಾಗುತ್ತದೆ. ಆದರೆ, ರಾಜ್ಯ ಸರ್ಕಾರ ಬದಲಾಗಿದ್ದರಿಂದ ಹೊಸದಾಗಿ ಸಮಿತಿ ರಚನೆಯಾಗಬೇಕಿದೆ. ನಮ್ಮ ಪಾಲಿನ ನೀರು ಹರಿಸುವಂತೆ ಸರ್ಕಾರವೂ ನಿರ್ದೇಶನ ನೀಡಿಲ್ಲ. ಈ ಕಾರಣಕ್ಕೆ ನಮ್ಮ ಭಾಗದ ಕಾಲುವೆಗಳಿಗೆ ನೀರು ಹರಿಸಲು ವಿಳಂಬವಾಗುತ್ತಿದೆ ಎನ್ನುತ್ತಾರೆ ತುಂಗಭದ್ರ ಮಂಡಳಿ ಅಧಿಕಾರಿಗಳು.

ಜಲಾಶಯದ ನೀರನ್ನೇ ನೆಚ್ಚಿಕೊಂಡಿರುವ ರೈತರಲ್ಲಿ ಅನೇಕರು ಇನ್ನೂ ಭತ್ತ ನಾಟಿ ಮಾಡಿಲ್ಲ. ಸದ್ಯ ಡ್ಯಾಮ್‌ನಿಂದ ಹರಿಸುವಷ್ಟು ನೀರು ಸಂಗ್ರಹವಿದ್ದರೂ, ತುಂಗಭದ್ರಾ ಎಡದಂಡೆ ಕಾಲುವೆ ಗೇಟ್ ಮತ್ತು ತೂಬ್‌ಗಳ ದುರಸ್ತಿ ವಿಳಂಬವೂ ನೀರು ಬಿಡದಿರುವುದಕ್ಕೆ ಕಾರಣ. ಸರ್ಕಾರ ಈ ಬಗ್ಗೆ ಗಮನ ಹರಿಸಿ, ದುರಸ್ತಿ ಕಾರ್ಯ ಚುರುಕುಗೊಳಿಸುವ ಜತೆಗೆ ಆದಷ್ಟು ಬೇಗ ನೀರಾವರಿ ಸಲಹಾ ಸಮಿತಿ ರಚನೆ ಮಾಡಿ, ಕಾಲುವೆಗಳಿಗೆ ನೀರು ಬಿಡಲು ಕ್ರಮವಹಿಸಬೇಕು. ಚಾಮರಸ ಮಾಲಿಪಾಟೀಲ್ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ

ಆಂಧ್ರ ಪ್ರದೇಶದ ಬೇಡಿಕೆ ಆಧರಿಸಿ ಶುಕ್ರವಾರದಿಂದ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ಈವರೆಗೆ ಯಾವುದೇ ನಿರ್ದೇಶನ ನೀಡಿಲ್ಲ. ಅಲ್ಲದೆ ಐಸಿಸಿ ರಚಿಸುವಂತೆ 15 ದಿನಗಳ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಎಲ್.ಬಸವರಾಜ್ಮುಖ್ಯ ಇಂಜಿನಿಯರ್, ತುಂಗಭದ್ರಾ ಯೋಜನೆ, ಮುನಿರಾಬಾದ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net