ನೆರೆ ಎದುರಿಸಲು ಸಿದ್ಧತೆಯಾಗಲಿ

web5
ಅಥಣಿ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿದರು. ದಿನೇಶಕುಮಾರ ಮೀನಾ, ವಾಣಿ ಯು., ರವಿ ಬಂಗಾರೆಪ್ಪನವರ, ಶಿವಾನಂದ ಕಲ್ಲಾಪುರ ಇದ್ದರು.
Published on

ಅಥಣಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಸುಮಾರು 22 ಗ್ರಾಮಗಳಿಗೆ ಎದುರಾಗಬಹುದಾದ ನೆರೆಹಾವಳಿ ಎದುರಿಸಲು ತಾಲೂಕಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳಬೇಕೆಂದು ಶಾಸಕ ಲಕ್ಷ್ಮಣ ಸವದಿ ಸೂಚನೆ ನೀಡಿದರು.

ತಾಪಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕುಮಟ್ಟದ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, 2019 ಮತ್ತು 2021ರಲ್ಲಿ ಆಗಿರುವ ಸಮಸ್ಯೆ ಮರುಕಳಿಸದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಜನ-ಜಾನುವಾರುಗಳಿಗೆ ತೊಂದರೆ ಆಗದಂತೆ ಎಚ್ಚರವಹಿಸಬೇಕು. ಪ್ರವಾಹ ಸಿದ್ದತೆ ಕುರಿತು ನೋಡಲ್ ಅಧಿಕಾರಿಗಳಿಂದ ಮಾಹಿತಿ ಪಡೆದು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ನೆರೆ ಸಂತ್ರಸ್ತರಿಗೆ ಕಾಳಜಿ ಕೇಂದ್ರ ಆರಂಭಿಸುವ ಮೂಲಕ ಅವರಿಗೆ ಊಟ ಹಾಗೂ ಜನಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು. ಪ್ರವಾಹಕ್ಕೆ ಸಿಲುಕುವ ಗ್ರಾಮಸ್ಥರ ಸ್ಥಳಾಂತರ ಹಾಗೂ ವಿದ್ಯುತ್ ವ್ಯವಸ್ಥೆಗೆ ಕ್ರಮ ಕೈಗೊಳಬೇಕು. ಅಸಡ್ಡೆ ತೋರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನೋಟಿಸ್ ನೀಡಲು ಸೂಚನೆ: ಈಗಾಗಲೆ ತಾಲೂಕಾಡಳಿತದಿಂದ ಗ್ರಾಮಮಟ್ಟದಲ್ಲಿ ನೇಮಿಸಿರುವ ನೋಡಲ್ ಅಧಿಕಾರಿಗಳು ಮತ್ತು ಅವರ ಸಹಾಯಕ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಸದೆ ಇರುವುದು ಕಂಡುಬಂದಿದೆ. ಅಲ್ಲದೆ ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ, ಶಿಸ್ತು ಕ್ರಮ ಕೈಕೊಳ್ಳಲು ತಹಸೀಲ್ದಾರ್ ಸವದಿ ಸೂಚನೆ ನೀಡಿದರು.

ವಿವಿಧ ಗ್ರಾಮಗಳಿಗೆ ಭೇಟಿ: ತಾಲೂಕಿನ ಹಲ್ಯಾಳ, ಹುಲಗಬಾಳಿ, ದರೂರ, ನದಿ ಇಂಗಳಗಾವಿ, ತೀರ್ಥ ಮತ್ತಿತರರ ಗ್ರಾಮಗಳಿಗೆ ಶಾಸಕ ಸವದಿ ಅವರು ಭಾನುವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ ಮೀನಾ, ತಹಸೀಲ್ದಾರ್ ವಾಣಿ ಯು., ಜಿಪಂ ಯೋಜನಾಧಿಕಾರಿ ರವಿ ಬಂಗಾರೆಪ್ಪನವರ, ಶಿವಾನಂದ ಕಲ್ಲಾಪುರ, ಶ್ರೀಪಾದ ಜಲ್ದೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net