

ಮಡಿಕೇರಿ: ಪುಟ್ಟ ಮಕ್ಕಳಲ್ಲಿ ಭಾರತ ದೇಶದ ಭವಿಷ್ಯವನ್ನು ಕಂಡ ಮಹಾನ್ ನೇತಾರ, ಮುತ್ಸದಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಬಣ್ಣಿಸಿದರು.
ಮಡಿಕೇರಿಯ ಹಿಂದೂಸ್ತಾನಿ ಶಾಲೆಯ ಅಂಗನವಾಡಿಯಲ್ಲಿ ಏರ್ಪಡಿಸಿದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೆಹರೂರವರು ದೂರದೃಷ್ಟಿ ಯುಳ್ಳ ನಾಯಕರಾಗಿದ್ದು ಸ್ವಾತಂತ್ರ್ಯ ಪಡೆದ ಸಮಯದಲ್ಲಿ ದೇಶದ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿ ಮಕ್ಕಳ ಶಿಕ್ಷಣ, ಆರೋಗ್ಯ, ಉದ್ಯೋಗಗಳಿಗೆ ಮಹತ್ವ ನೀಡಿ ಹಲವಾರು ಯೋಜನೆಗಳನ್ನು ರೂಪಿಸಿದ ಪರಿಣಾಮ ದೇಶದ ಅಭಿವೃದ್ಧಿ ಸಾಧ್ಯವಾಯಿತು. ಮಕ್ಕಳ ಬಗ್ಗೆ ನೆಹರೂರವರಿಗೆ ಇದ್ದ ಅತೀ ಕಾಳಜಿಯನ್ನು ಗಮನಿಸಿ ದೇಶ ಅವರ ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆ ಎಂದು ಆಚರಿಸುವ ಮೂಲಕ ಗೌರವಿಸುತ್ತಿದೆ. ಇಂತಹ ಗೌರವ ಜಗತ್ತಿನ ಯಾವ ನಾಯಕರಿಗೂ ಲಭಿಸಿಲ್ಲಾ ಎಂದು ವಿವರಿಸಿದರು.ನೆಹರೂ ರವರ ಆದರ್ಶಗಳನ್ನು ಮಕ್ಕಳಿಗೆ ಮನದಟ್ಟು ಮಾಡುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರು ನಿಭಾಯಿಸಬೇಕು ಎಂದು ಕರೆ ನೀಡಿದರು.
ಅಂಗನವಾಡಿ ಆಹಾರ ರಾಜ್ಯಾದ್ಯಂತ ಏಕ ಪ್ರಕಾರವಾಗಿದ್ದು ಪ್ರಸ್ತುತ ನೀಡುತ್ತಿರುವ ಆಹಾರ ಇಲ್ಲಿನ ಮಕ್ಕಳಿಗೆ ಸೇರುತ್ತಿಲ್ಲ ಎಂಬ ಪೋಷಕರ ಮನವಿಗೆ ಉತ್ತರಿಸಿದ ತೆನ್ನಿರ ಮೈನಾ ರವರು ಈ ವಿಚಾರವನ್ನು ಮಾನ್ಯ ಶಾಸಕದ್ವಯರಾದ ಡಾ ಮಂತರ್‌ಗೌಡ ಹಾಗೂ ಎ.ಎಸ್.ಪೊನ್ನಣ್ಣನವರ ಗಮನಕ್ಕೆ ತಂದು ಪ್ರಾದೇಶಿಕವಾಗಿ ಬಳಕೆ ಮಾಡುವ ಆಹಾರ ವಿತರಣೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಉದ್ಯಮಿ ಕಲೀಲ್ ಬಾಷ ಮಾತನಾಡಿ, ಅಂಗನವಾಡಿಯಲ್ಲಿ ಮಕ್ಕಳು ಉತ್ತಮ ಸಂಸ್ಕಾರವನ್ನು ವಿದ್ಯೆಯ ಜೊತೆ ಕಲಿಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥಳೀಯ ಯುವ ಮುಖಂಡ ರವೂಫ್ ಶೇಖ್ ಮಾತನಾಡಿ, ಈ ಅಂಗನವಾಡಿಯ ಅಭಿವೃದ್ಧಿಗೆ ಶಾಸಕರಾದ ಡಾ.ಮಂತರ್‌ಗೌಡ ರವರು ಒಂದು ಲಕ್ಷ ರೂಗಳನ್ನು ನೀಡಿದ್ದು ಸದ್ಯದಲ್ಲಿಯೇ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದರು.
ಅಂಗನವಾಡಿ ಮಕ್ಕಳಿಂದ ಛದ್ಮವೇಷ ಪ್ರದರ್ಶನ ನಡೆಸಲಾಯಿತು. ಡಾ.ಬಿ.ಆರ್.ಅಂಬೇಡ್ಕರ್, ಬಾಲ ಮಹಾತ್ಮ ಗಾಂಧಿ, ಡಾಕ್ಟರ್ ಮೇಡಂ, ಕಿತ್ತೂರ ರಾಣಿ ಚೆನ್ನಮ್ಮ, ಕೊಡಗಿನ ಬೆಡಗಿ, ನ್ಯೂಸ್ ಪೇಪರ್ ಗರ್ಲ್ ಸೇರಿದಂತೆ ವಿವಿಧ ವೇಷಗಳಲ್ಲಿ ಮಕ್ಕಳು ಸಂಭ್ರಮಿಸಿದರು.
ಕೆ.ನಿಡುಗಣೆ ಗ್ರಾಮ ಪಂಚಾಯತ್ ಸದಸ್ಯರಾದ ಜಾನ್ಸನ್ ಪಿಂಟೋ, ಸ್ಥಳೀಯ ರಾದ ಮೀನಾಕ್ಷಿ, ಪೂರ್ಣಿಮಾವಿಮಲ ರೈ, ರಮೀಝಾ ಸೇರಿದಂತೆ ಸ್ಥಳೀಯರು, ಪೋಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಂಗನವಾಡಿ ಕಾರ್ಯಕರ್ತೆ ಸುಮತಿಯವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.