

ಬಂಕಾಪುರ: ಪಟ್ಟಣದ ನೆಹರು ಗಾರ್ಡನ್ನಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ಮಂಟಪಕ್ಕೆ ಶಾಸಕ ಯಾಸೀರಅಹ್ಮದಖಾನ್ ಪಠಾಣ ಸೋಮವಾರ ಭೇಟಿ ನೀಡಿ ಗಣಪತಿಗೆ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಶಾಸಕ ಯಾಸೀರಅಹ್ಮದಖಾನ್ ಪಠಾಣ, ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ವರ್ಷ ವಿಜೃಂಭಣೆಯಿಂದ ಗಣೇಶ ವಿಸರ್ಜನೆ ಮಾಡಲು ಸಂಪೂರ್ಣ ಸಹಕಾರ ನೀಡಲಾಗುವುದು. ಈ ಕುರಿತು ಎಸ್ಪಿ ಮತ್ತು ಉಸ್ತುವಾರಿ ಸಚಿವರ ಜತೆಗೆ ಮಾತನಾಡಿ, ಶಾಂತಿ ಮತ್ತು ಸೌಹಾರ್ದದೊಂದಿಗೆ ಗಣೇಶ ವಿಸರ್ಜನೆಗೆ ಅನುವು ಮಾಡಿಕೊಡಲಾಗುವುದು ಎಂದರು.
ಪಟ್ಟಣದಲ್ಲಿ ಸುಮಾರು ವರ್ಷಗಳಿಂದ ವಿವಾದದ ಕೇಂದ್ರ ಬಿಂದುವಾಗಿರುವ ನೆಹರು ಗಾರ್ಡನ್ ಜಾಗದ ವ್ಯಾಜ್ಯದ ಕುರಿತು ಎರಡು ಸಮಾಜದ ಮುಖಂಡರ ಜತೆ ಈಗಾಗಲೇ ಚರ್ಚೆ ಮಾಡಿದ್ದೇನೆ. ಇದಕ್ಕೆ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಾನು ಮಧ್ಯಸ್ಥಿಕೆ ವಹಿಸಿ ಶೀಘ್ರ ನೆಹರು ಗಾರ್ಡನ್ ಜಾಗದ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲಾಗುವುದು ಎಂದರು.
ಹಿಂದು ಮಹಾಗಣಪತಿ ಸಮತಿ ಸದಸ್ಯರಾದ ಗಂಗಾಧರ ಮಾಮ್ಲೇಪಟ್ಟಣಶೆಟ್ಟರ್, ಹೊನ್ನಪ್ಪ ಹೂಗಾರ, ಸೋಮಶೇಖರ ಗೌರಿಮಠ, ಗಿರೀಶ ಬೈಲವಾಳ, ಮುತ್ತಪ್ಪ ಕುರಿ, ಬಸವರಾಜ ನಾರಾಯಣಪುರ, ಗುಡ್ಡಪ್ಪ ಮತ್ತೂರ, ಶಿವಾನಂದ ದೇವಸೂರ, ಸಿದ್ದೀಕ ಖತೀಬ ಮತ್ತಿತರರು ಉಪಸ್ಥಿತರಿದ್ದರು.