ನೇಹಾ ಹತ್ಯ ಪ್ರಕರಣ ಸಿಬಿಐಗೆ ವಹಿಸಿ

h23-Vijayendra Neha 2
Published on

ಹುಬ್ಬಳ್ಳಿ: ರಾಜ್ಯಕಾಂಗ್ರೆಸ್ ಸರ್ಕಾರವು ನೇಹಾ ಹಿರೇಮಠ ಅವರ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ಇದನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.
ಇಲ್ಲಿನ ಬಿಡ್ನಾಳ ಬಸವ ನಗರದಲ್ಲಿರುವ ಮೃತ ನೇಹಾಳ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ, ತಂದೆ-ತಾಯಿಗೆ ಸಾಂತ್ವನ ಹೇಳಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರವು ನೇಹಾ ಅವರ ಹತ್ಯೆ ಬಗ್ಗೆ ನಡೆದುಕೊಂಡ ನಡವಳಿಕೆ ಸರಿಯಾಗಿರಲಿಲ್ಲ. ಸಿಎಂ, ಡಿಸಿಎಂ ಸೇರಿದಂತೆ ಸರ್ಕಾರದ ಸಚಿವರು ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ಇದರ ವಿರುದ್ಧ ನಾವು ರಾಜ್ಯಾದ್ಯಂತ ಹೋರಾಟ ನಡೆಸಿ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ್ದೆವು. ಆದರೆ ಸಿಐಡಿಗೆ ವಹಿಸಿದೆ. ಅದು ನಿಧಾನವಾಗಿ ತನಿಖೆ ನಡೆಸುತ್ತಿದೆ ಎಂದು ಆರೋಪಿಸಿದರು.
ನೇಹಾಳ ತಂದೆ ಸ್ವತಃ ನಾಲ್ಕೈದು ಜನರ ಮೇಲೆ ಆರೋಪ ಮಾಡಿದ್ದಾರೆ. ಹಂತಕನಿಗೆ ಕಠಿಣ ಶಿಕ್ಷೆ ಆಗಬೇಕೆಂದು ತಂದೆ-ತಾಯಿ ಆಗ್ರಹಿಸಿದ್ದಾರೆ. ಆದರೆ ಇದುವರೆಗೂ ಹಂತಕ ಹೊರತುಪಡಿಸಿ ಯಾರನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.
ಕೊಲೆ ಕೊಲೆಯೇ? ಅದಕ್ಕೆ ಜಾತಿ ಬಣ್ಣ ಬಳಿಯುವ ಅವಶ್ಯವಿಲ್ಲ. ಸರ್ಕಾರ ಈ ಪ್ರಕರಣವನ್ನು ತಕ್ಷಣ ಸಿಬಿಐಗೆ ವಹಿಸಬೇಕು.
ರಾಜ್ಯದಲ್ಲಿ ದಿನೇ ದಿನೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ನಮ್ಮದೇ ಸರ್ಕಾರವಿದೆ. ಏನು ಬೇಕಾದರೂ ಮಾಡಬಹುದೆಂಬ ಭಾವನೆ ಸರಿಯಲ್ಲ. ಅಖಂಡ ಶ್ರೀನಿವಾಸ ಮನೆಗೆ ಬೆಂಕಿ ಹಚ್ಚಿದಾಗ, ಸ್ವತಃ ತಮ್ಮ ಪಕ್ಷದ ದಲಿತ ಶಾಸಕನ ಪರ ಧ್ವನಿ ಎತ್ತದೆ ಅಲ್ಪಸಂಖ್ಯಾತರ ಓಲೈಕೆ ಮಾಡಿದರು. ಇದು ಕಾಂಗ್ರೆಸ್ ಸಂಸ್ಕೃತಿ ಎಂದು ಹರಿಹಾಯ್ದರು.
ನಾಲಾಯಕ್ ಸಿಎಂ ಎಂದು ನೀವು ಹೇಳಿಕೆ ನೀಡಿದ ಬಗ್ಗೆ ಸಚಿವ ಲಾಡ ಅವರು ಯಡಿಯೂರಪ್ಪ ಇಲ್ಲದಿದ್ದರೆ ವಿಜಯೇಂದ್ರ ಜೀರೋ ಎಂದಿದ್ದಾರಲ್ಲ ಎಂದಿದ್ದಕ್ಕೆ, ನಾನು ಹೀರೋ ಎಂದು ಯಾವಾಗ ಹೇಳಿದ್ದೇನೆ? ಅವರು ಪಿಎಂ ಬಗ್ಗೆ ಏಕವಚನದಲ್ಲಿ ಮಾತನಾಡಬಹುದು. ನಾವು ಅದಕ್ಕೆ ಸುಮ್ಮನೆ ಕುಳಿತುಕೊಳ್ಳಬೇಕೆ ಎಂದು ಪ್ರಶ್ನಿಸಿದರು.
ವಿದ್ಯಾರ್ಥಿನಿಯೊಬ್ಬಳ ಹಾಡಹಗಲೇ ಹತ್ಯೆಯಾದಾಗ ಸರ್ಕಾರವೇ ದಿಕ್ಕು ತಪ್ಪಿಸುವ ಹೇಳಿಕೆ ಕೊಟ್ಟಾಗ ನಾವು ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕೆ?. ಮಾನವೀಯತೆ ಉಳ್ಳವರು ಖಂಡಿಸಲೇಬೇಕಾಗುತ್ತದೆ. ಇಂತಹ ಪ್ರಕರಣಕ್ಕೆ ಇತಿಶ್ರೀ ಹಾಕಬೇಕು ಎಂದರು.
ನಾಲಾಯಕ್ ಸಿಎಂ ಎಂದು ನೀವು ಹೇಳಿಕೆ ನೀಡಿದ್ದರ ಬಗ್ಗೆ ಸಚಿವ ಲಾಡ್ ಅವರು ಯಡಿಯೂರಪ್ಪ ಇಲ್ಲದಿದ್ದರೆ ವಿಜಯೇಂದ್ರ ಜೀರೋ ಎಂದಿದ್ದಾರಲ್ಲ ? ಎಂದು ಪ್ರಶ್ನೆ ಮಾಡಿದ್ದಕ್ಕೆ, ನಾನು ಹೀರೋ ಎಂದು ಯಾವಾಗ ಹೇಳಿದ್ದೇನೆ? ಅವರು ಪಿಎಂ ಬಗ್ಗೆ ಏಕವಚನದಲ್ಲಿ ಮಾತನಾಡಬಹುದು. ನಾವು ಅದಕ್ಕೆ ಸುಮ್ಮನೆ ಕುಳಿತುಕೊಳ್ಳಬೇಕೆ? ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net