ಪೊಲೀಸರಿಂದ ಸಂಧಾನ, ತಣ್ಣಗಾದ ಆದರಹಳ್ಳಿ ವೈಷಮ್ಯ

22 LXR 1
Published on

ಲಕ್ಷ್ಮೇಶ್ವರ: ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಭೋವಿ, ಲಂಬಾಣಿ ಸಮಾಜದವರ ನಡುವೆ ಉಂಟಾಗಿದ್ದ ವೈಷಮ್ಯ ತಣ್ಣಗಾಗಿದ್ದು, ಉಭಯ ಸಮಾಜಗಳ ಮುಖಂಡರ ನಡುವೆ ಪೊಲೀಸ್ ಅಧಿಕಾರಿಗಳು ಭಾನುವಾರ ನಡೆಸಿದ ಸಂಧಾನ ಯಶಸ್ವಿಯಾಗಿದೆ. ಎಲ್ಲರ ಭರವಸೆ ಮೇರೆಗೆ ಗವಿಸಿದ್ಧೇಶ್ವರ ಮಠದ ಕುಮಾರ ಮಹಾರಾಜರು ಪ್ರತಿಭಟನೆ ಹಿಂಪಡೆದರು.
ಎರಡೂ ಸಮಾಜದ ಯುವಕರು 2-3 ದಿನಗಳ ಹಿಂದೆ ಗಲಾಟೆ ಮಾಡಿಕೊಂಡಿದ್ದರಿಂದ ವಿವಾದ ದೊಡ್ಡದಾಗಿತ್ತು. ಶ್ರೀಗಳು ಮಧ್ಯೆಪ್ರವೇಶಿಸಿ ಹೋರಾಟಕ್ಕೆ ಮುಂದಾಗಿದ್ದರು. ಮುಖಂಡರಾದ ಮಂಜುನಾಥ ಮಾಗಡಿ, ನೀಲಪ್ಪ ಶರಸೂರಿ, ಪಿಎಸ್‌ಐ ಈರಪ್ಪ ರಿತ್ತಿ, ಭೋವಿ ಮತ್ತು ಲಂಬಾಣಿ ಸಮಾಜದ ಮುಖಂಡರು ಮಾತುಕತೆ ನಡೆಸಿ ರಾಜಿ ಸಂಧಾನ ಮಾಡಿಸಿದರು.
ಶ್ರೀಗಳಿಂದ ರಸ್ತೆಯಲ್ಲೇ ಪ್ರತಿಭಟನೆ: ಇದಕ್ಕೂ ಮುನ್ನ ಜೀವ ಬೆದರಿಕೆ ಹಾಕಿರುವ ಮತ್ತು ಸಮಾಜದ ಯುವಕರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿ ಕುಮಾರ ಮಹಾರಾಜರು ನೂರಾರು ಭಕ್ತರೊಂದಿಗೆ ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಶ್ರೀಗಳು ಮಾತನಾಡಿ, ಆದರಹಳ್ಳಿ ಗ್ರಾಮದಲ್ಲಿ ಭೋವಿ, ಲಂಬಾಣಿ, ಮುಸ್ಲಿಂ ಸೇರಿ ಎಲ್ಲ ಸಮಾಜಗಳವರು ಹೊಂದಾಣಿಕೆಯಿಂದ ಇದ್ದಾರೆ. ಕೆಲ ದಿನಗಳ ಹಿಂದೆ ನಡೆದ ಲಂಬಾಣಿ ಸಮಾಜದ ಯುವಕರ ಮೇಲೆ ಭೋವಿ ಸಮಾಜದ ಯುವಕರು ಹಲ್ಲೆ ಮಾಡಿದ್ದು, ವೃದ್ಧರು, ಮಹಿಳೆಯರ ಮೇಲೆಯೂ ಹಲ್ಲೆ ಮಾಡಲಾಗಿದೆ. ತಾವು ಬೇರೆ ಊರಲ್ಲಿ ಇದ್ದರೂ ನನಗೆ ಭೋವಿ ಸಮಾಜದ ಕೆಲ ಮುಖಂಡರು ಕರೆ ಮಾಡಿ ಜೀವ ಬೆದರಿಕೆ ಒಡ್ಡುತ್ತಿದ್ದರು. ನಾವು ಭೋವಿ ಸಮಾಜದ ವಿರುದ್ಧ ಹೋರಾಟ ಮಾಡುತ್ತಿಲ್ಲ, ಸಮಾಜದೊಳಗೆ ಇರುವ ಕೆಲ ವ್ಯಕ್ತಿಗಳು ಸಮಾಜಕ್ಕೆ ಚ್ಯುತಿ ತರುವಂತಹ ಕಾರ್ಯ ಮಾಡುತ್ತಿದ್ದು, ಅವರ ವಿರುದ್ಧ ನಮ್ಮ ಹೋರಾಟ ನಡೆಯುತ್ತದೆ ಎಂದು ತಿಳಿಸಿದರು.
ನನ್ನನ್ನು ಮಠ ಬಿಟ್ಟು ಹೋಗುವಂತೆ ಹೇಳಲು ಇವರು ಯಾರು?. ಮಠದ ಹತ್ತಿರ ಅಕ್ರಮ ಗಣಿಗಾರಿಕೆಗೆ ವಿರೋಧಿಸುವುದು ತಪ್ಪೇ?. ಮತಾಂತರ ಮಾಡುತ್ತಿರುವವರಿಗೆ ಬೆಂಬಲ ನೀಡುತ್ತಿದ್ದಾರೆ. ನಮ್ಮ ರೈತರಿಗೆ ತೊಂದರೆಯಾಗುತ್ತಿದೆ, ಇದು ತಪ್ಪಬೇಕು ಎಂದು ಭಕ್ತರೊಂದಿಗೆ ಸೇರಿ ಪ್ರತಿಭಟಿಸಿದ್ದೇವೆ. ಇದಕ್ಕಾಗಿ ನಮ್ಮ ಮೇಲೆ ಹಗೆ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗೋರ ಸೇನಾ ರಾಜ್ಯಾಧ್ಯಕ್ಷ, ಬಂಜಾರ ಕಲ್ಯಾಣ ಸಂಘದ ಜಿಲ್ಲಾಧ್ಯಕ್ಷ ರವಿಕಾಂತ ಅಂಗಡಿ, ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ ಮಾತನಾಡಿ, ಪೂಜ್ಯರು ಎಲ್ಲ ಸಮಾಜಗಳೊಂದಿಗೆ ಹೊಂದಿಕೊಂಡು ಹೋಗುವ ಸ್ವಭಾವದವರಾಗಿದ್ದಾರೆ. ಅವರ ಸೌಮ್ಯ ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಸಲ್ಲ, ಇಂತಹ ಘಟನೆಗಳಿಂದ ಊರಿನ ವಾತಾವರಣ ಹದಗೆಡುತ್ತದೆ. ಪೊಲೀಸರು ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು ಎಂದರು. ಶಂಕರಗೌಡ ಪಾಟೀಲ, ಮಹಾಂತಗೌಡ ಪಾಟೀಲ, ಮಂಜಪ್ಪ ಸುಣಗಾರ, ಪರಶುರಾಮ ನಾಯಕ, ಶೇಖಪ್ಪ ಲಮಾಣಿ, ನಾಗೇಶ ಲಮಾಣಿ, ಶೇಖಪ್ಪ ನಾಯಕ, ನರಸಪ್ಪ ಡಾವ, ಲಕ್ಷ್ಮಣ ನಾಯಕ, ಕಾಶಪ್ಪ ಲಮಾಣಿ, ಶಾರವ್ವ ಲಮಾಣಿ, ಲಕ್ಷ್ಮವ್ವ ಲಮಾಣಿ, ಪ್ರೇಮಾ ಲಮಾಣಿ, ಬಾವವ್ವ ಲಮಾಣಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net