

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಕೆಎಲ್ ಇ ಸಂಸ್ಥೆಯ ಜಿ.ಕೆ. ಕಾನೂನು ಮಹಾವಿದ್ಯಾಲಯದ ವತಿಯಿಂದ ವಕೀಲರಾಗ ಬಯಸುವ ವಿದ್ಯಾರ್ಥಿಗಳಲ್ಲಿ ವೃತ್ತಿಪರತೆ ಉತ್ತೇಜಿಸುವ ಸಲುವಾಗಿ ಸಂಧಾನ ಸ್ಪರ್ಧೆಯನ್ನು ಏ. 5 ಹಾಗೂ 6ರಂದು ನಗರದ ಬಿವಿಬಿ ಕ್ಯಾಂಪಸ್ ನಲ್ಲಿರುವ ಐಎಂಎಸ್ಆರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಜ್ಞಾನೇಶ್ವರ ಚೌರಿ ತಿಳಿಸಿದರು.
ಕಾಲೇಜಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ಕೆಎಲ್ಇ ಲಾ ಅಕಾಡೆಮಿ ಸಹಯೋಗದಲ್ಲಿ ಏ. 5ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಿರುವ ಸಮಾರಂಭದಲ್ಲಿ ಸಂಧಾನ ಸ್ಪರ್ಧೆಯನ್ನು ಧಾರವಾಡ ಹೈಕೋರ್ಟ್ ನ್ಯಾಯಾಧೀಶ ಇ.ಎಸ್. ಇಂದಿರೇಶ ಅವರು ಉದ್ಘಾಟಿಸುವರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ, ಡಾ. ಬಾಬುಗೌಡ ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು. ಕೆಎಲ್ಇ ಸಂಸ್ಥೆಯ ನಿರ್ದೇಶಕ ಶ್ರೀಶೈಲಪ್ಪ ಮೆಟಗುಡ್ಡ ಅಧ್ಯಕ್ಷತೆ ವಹಿಸುವರು.
ಏ. 6ರಂದು ಸಂಜೆ 4ಕ್ಕೆ ಹಮ್ಮಿಕೊಂಡಿರುವ ಸಮಾರೋಪದಲ್ಲಿ ಹೈಕೋರ್ಟ್ ನ್ಯಾಯಾಧೀಶ ಶಿವಶಂಕರ ಅಮರಣ್ಣವರ ಅವರು ಸಮಾರೋಪ ಭಾಷಣ ಮಾಡುವರು. ಕಾನೂನು ವಿಶ್ವ ವಿದ್ಯಾಲಯದ ಕುಲಪತಿ ಡಾ. ಸಿ. ಬಸವರಾಜು, ಬೆಳಗಾವಿ ಜಿಲ್ಲಾ ಗ್ರಾಹಕರ ಕುಂದುಕೊರತೆ ಪರಿಹಾರ ಆಯೋಗದ ಅಧ್ಯಕ್ಷ ಎಂ.ಐ. ಶಿಗ್ಲಿ, ಡಾ. ಜಿ.ಬಿ. ಪಾಟೀಲ, ವಕೀಲ ಎಂ.ಬಿ. ಹಿರೇಮಠ ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿದ್ಯಾರ್ಥಿಗಳಿಗೆ ನ್ಯಾಯಾಲಯಕ್ಕೆ ಬರುವ ವ್ಯಾಜ್ಯಗಳ ಬಗ್ಗೆ ತಿಳಿವಳಿಕೆ ನೀಡುವುದು, ಅವುಗಳನ್ನು ಸಂಧಾನದ ಮೂಲಕ ಹೇಗೆ ಬಗೆ ಹರಿಸಬಹುದು ಎಂಬುದನ್ನು ತಿಳಿಸಿಕೊಡಲು ಈ ಸ್ಪರ್ಧೆ ನೆರವಾಗಲಿದೆ ಎಂದು ಡಾ. ಚೌರಿ ವಿವರಿಸಿದರು.
ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 22 ತಂಡಗಳು ಭಾಗವಹಿಸಲಿವೆ. ಒಂದು ತಂಡದಲ್ಲಿ ಇಬ್ಬರಿಗೆ ಹಾಗೂ ಒಂದು ಕಾಲೇಜಿನಿಂದ ಎರಡು ತಂಡಗಳು ಭಾಗವಹಿಸಲು ಅವಕಾಶ ನೀಡಲಾಗಿದೆ. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ, ಪ್ರಮಾಣ ಪತ್ರ ಹಾಗೂ ಟ್ರೋಫಿ ವಿತರಿಸಲಾಗುವುದು ಎಂದು ಹೇಳಿದರು.
ಡಾ. ಸಂಜೀವ ಹುಲ್ಲೂರ, ಡಾ. ಶಾರದಾ ಪಾಟೀಲ ಗೋಷ್ಠಿಯಲ್ಲಿದ್ದರು.