ಬಾಣಂತನ ವೇಳೆ ನಿರ್ಲಕ್ಷ್ಯ ಗರ್ಭಿಣಿ ಸಾವು : ಗ್ರಾಹಕರ ಆಯೋಗದಿಂದ ವೈದ್ಯರಿಗೆ ದಂಡ

court loge
Published on

ವಿಜಯಪುರ : ಬಾಣಂತನ ವೇಳೆ ನಿರ್ಲಕ್ಷೃ ವಹಿಸಿದ್ದಲ್ಲದೇ ಗರ್ಭಿಣಿ ಸಾವಿಗೆ ಕಾರಣರಾದ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಗ್ರಾಹಕರ ಆಯೋಗ 15 ಲಕ್ಷ ರೂ.ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ತಿಕೋಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂದಿನ ಮೆಡಿಕಲ್ ಆಫೀಸರ್ ಡಾ.ನಂದಿನಿ, ರೇಣುಕಾ ಬನ್ನೂರ, ಜ್ಯೋತಿ ಹೊಸಮನಿ, ಸುನಿತಾ ಭಾವಿಮನಿ ಅವರಿಗೆ ದಂಡ ವಿಧಿಸಲಾಗಿದೆ.

2019 ನ.20ರಂದು ಅಥಣಿ ತಾಲೂಕಿನ ಹಣಮಾಪುರ ಗ್ರಾಮದ ಸುರೇಶ ಮಜ್ಜಗಿ ಮತ್ತು ಇವರ ಮಗಳು ಸುಮಿತಾ ವಿಜಯಪುರ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಸಲ್ಲಿಸಿದ ದೂರಿನ ಅನ್ವಯ ತೀರ್ಪು ಪ್ರಕಟಿಸಲಾಗಿದೆ.

ಏನಿದು ಪ್ರಕರಣ? ಮೃತ ಜಯಶ್ರೀ 2018 ಜೂ.3ರಂದು ತಿಕೋಟಾ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆರಿಗೆಗಾಗಿ ದಾಖಲಾಗಿದ್ದಳು. ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗ ವೈದ್ಯರು ಇಲ್ಲದ ಕಾರಣ ಶುಶ್ರೂಷಕಿ ರೇಣುಕಾ ಬನ್ನೂರ ತಾವೇ ದಾಖಲು ಮಾಡಿಕೊಂಡಿದ್ದಾರೆ. ಸಾಕಷ್ಟು ಸಮಯ ಕಳೆದರೂ ವೈದ್ಯರು ಬಾರದ ಹಿನ್ನೆಲೆ ಜ್ಯೋತಿ ಹೊಸಮನಿ ಹಾಗೂ ಸುನಿತಾ ಭಾವಿಮನಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಆಗ ಹೆಣ್ಣು ಮಗು ಜನಿಸಿದೆ. ಆದರೆ, ಹೆರಿಗೆ ಬಳಿಕ ಗರ್ಭಕೋಶ ಹೊರಬಂದಿದ್ದು, ಮುಂದಿನ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ತಿಳಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸಲಾಗಿ ಜಯಶ್ರೀ ಚಿಕಿತ್ಸೆ ಫಲಿಸದೆ 2018 ಜೂ.6ರಂದು ನಿಧನರಾಗಿದ್ದರು.

ನೋಟಿಸ್ ಜಾರಿ: ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಹಕರ ಆಯೋಗ ನಾಲ್ವರು ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು. ಈ ಬಗ್ಗೆ ಸಾಕಷ್ಟು ಅವಕಾಶ ನೀಡಿದರೂ ತಕರಾರು ಮತ್ತು ದಾಖಲೆಗಳನ್ನು ನೀಡದ ಹಿನ್ನೆಲೆ ಒಟ್ಟು 15ಲಕ್ಷ ರೂ.ದಂಡ ವಿಧಿಸಲಾಗಿದೆ. ಇದರಲ್ಲಿ ಡಾ.ನಂದಿನಿ ಒಬ್ಬರೇ 11ಲಕ್ಷ ರೂ. ದಂಡ ಪಾವತಿಸಬೇಕು. ಇನ್ನುಳಿದ ಮೂವರು ಸೇರಿ 4ಲಕ್ಷ ರೂ.ದಂಡ ಪಾವತಿಸಬೇಕು. ಅಲ್ಲದೇ ದೂರು ದಾಖಲಾದ ದಿನದಿಂದ ಶೇ.9ರಷ್ಟು ಬಡ್ಡಿ ಪಾವತಿಸಬೇಕು. ತಪ್ಪಿದ್ದಲ್ಲಿ ಶೇ.12ರಷ್ಟು ಬಡ್ಡಿಯೊಂದಿಗೆ ಹಣ ಪಾವತಿಸಲು ತೀರ್ಪಿನಲ್ಲಿ ತಿಳಿಸಲಾಗಿದೆ.

ಮುಂದುವರಿದು ರೇಣುಕಾ ಬನ್ನೂರ, ಜ್ಯೋತಿ ಹೊಸಮನಿ, ಸುನಿತಾ ಭಾವಿಮನಿ ಒಟ್ಟಿಗೆ ಇಲ್ಲವೇ ಪ್ರತ್ಯೇಕ ಮಾನಸಿಕ ವ್ಯಥೆಗೆ 25 ಸಾವಿರ ರೂ.ಹಾಗೂ ದೂರಿನ ಖರ್ಚು ಎಂದು 10ಸಾವಿರ ರೂ.ಪಾವತಿಸಲು ಆಯೋಗದ ಅಧ್ಯಕ್ಷ ಅಂಬಾದಾಸ ಕುಲಕರ್ಣಿ, ಸದಸ್ಯೆ ವಿ.ಬಿ.ಮುತಾಲಿಕ ದೇಸಾಯಿ ಹಾಗೂ ಕಮಲಕಿಶೋರ್ ಜೋಶಿ ಅವರನ್ನು ಒಳಗೊಂಡ ಆಯೋಗ ಆದೇಶ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net