

ಲಕ್ಷ್ಮೇಶ್ವರ: ಪಟ್ಟಣದ ಕಲಾಂ ನಗರದ ಹತ್ತಿರವಿರುವ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ವಿದ್ಯಾಸಂಸ್ಥೆಯ ಡಾ.ಬಿ.ಆರ್. ಅಂಬೇಡ್ಕರ್ ಅನುದಾನಿತ ಪ್ರೌಢಶಾಲೆಯ ಬಳಿ ಚರಂಡಿ ನೀರು ತುಂಬಿಕೊಳ್ಳುತ್ತಿದೆ. ಇದರ ಬಗ್ಗೆ ನಿರ್ಲಕ್ಷೃ ವಹಿಸಿದ ಪುರಸಭೆ ಅಧಿಕಾರಿಗಳನ್ನು ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಬುಧವಾರ ತರಾಟೆಗೆ ತೆಗೆದುಕೊಂಡರು.
ಬೆಳಗ್ಗೆ ಪುರಸಭೆಗೆ ಆಗಮಿಸಿದ ಹನುಮಂತಪ್ಪ, ಕಳೆದ 3-4 ವರ್ಷಗಳಿಂದ ಚರಂಡಿ ನೀರು ಶಾಲೆಯ ಆವರಣಕ್ಕೆ ನುಗ್ಗಿ ಮಕ್ಕಳಿಗೆ ತೊಂದರೆಯಾಗುತ್ತಿದೆ. ವಾಸನೆಯಿಂದ ಮಕ್ಕಳು ಊಟ ಮಾಡಲು ಹಿಂಜರಿಯುವಂತಾಗಿದೆ. ಗಲೀಜು ನೀರಿನಿಂದ ಮಕ್ಕಳು, ಶಿಕ್ಷಕರಿಗೆ ಆರೋಗ್ಯದ ಸಮಸ್ಯೆ ಹೆಚ್ಚುತ್ತಿವೆ. ಈ ಕುರಿತು ಪುರಸಭೆಯವರ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದಿರಲು ಕಾರಣವೇನು ಎಂದು ಪ್ರಶ್ನಿಸಿದರು.
ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕೆಂಬ ನಿರ್ದೇಶನವಿದೆ. ಆದರೆ, ಹಿಂದುಳಿದ ವರ್ಗಗಳ ಸಂಸ್ಥೆಯ ಶಾಲೆ ಇದಾಗಿದ್ದು, ಅದೇ ಉದ್ದೇಶದಿಂದಲೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ಹಿಂದೆ ಗದಗ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ಸರಿಪಡಿಸುವಂತೆ ಸೂಚನೆ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಜಿಲ್ಲಾಧಿಕಾರಿಗಳ ಆದೇಶವನ್ನು ತಿರಸ್ಕರಿಸಿದಂತಾಗಿದೆ ಎಂದ ಅವರು ಯಾವುದೇ ಕಾರಣಕ್ಕೂ ಸಮಸ್ಯೆ ಬಗೆಹರಿಸದ ಹೊರತು ಇಲ್ಲಿಂದ ಕದಲುವದಿಲ್ಲ ಎಂದು ಪಟ್ಟು ಹಿಡಿದರು.
ಪುರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಇಂಜಿನಿಯರ್ ಕಾಟೇವಾಲೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಜೆಸಿಬಿ ಮೂಲಕ ನೀರು ತೆರವುಗೊಳಿಸಿದರು. ಜಾಕೀರ್‌ಹುಸೇನ್ ಹವಾಲ್ದಾರ ಇದ್ದರು.