

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ- ಯಾದವಾಡ ಮಾರ್ಗದ ದಾಸನಕೊಪ್ಪ ಗ್ರಾಮದ ಬಳಿಯ ಹಾತರಕಿ ಹಳ್ಳ ಬಲಿಗಾಗಿ ಕಾಯುತ್ತಿದೆ. ಮಳೆಯಾದಾಗೊಮ್ಮೆ ತುಂಬಿ ಹರಿಯುವ ಸೇತುವೆಯನ್ನು ಮೇಲಕ್ಕೆ ಎತ್ತರಿಸಬೇಕು ಎಂಬ ಬೇಡಿಕೆ ದಶಕಗಳಿಂದ ಈಡೇರಿಲ್ಲ. ಈ ಸೇತುವೆ ಬಲಿಗಾಗಿ ಕಾಯುತ್ತಿದ್ದರೂ ಲೋಕೋಪಯೋಗಿ ಇಲಾಖೆ ಅಽಕಾರಿಗಳ ಗಮನಕ್ಕೆ ಬಂದಿಲ್ಲ.
ಯಾದವಾಡ ಮಾರ್ಗವಾಗಿ ಹತ್ತಾರು ಗ್ರಾಮಗಳ ಜನ ನಿತ್ಯ ಸಂಚರಿಸುತ್ತಾರೆ. ಈ ರಸ್ತೆ ದಾಸನಕೊಪ್ಪ, ಲಕಮಾಪುರ, ಶಿಬಾರಗಟ್ಟಿ, ಲೋಕೂರ, ಉಪ್ಪಿನ ಬೆಟಗೇರಿ ಸೇರಿ ಹಲವು ಗ್ರಾಮಗಳನ್ನು ಸಂಚರಿಸುತ್ತದೆ. ಉಪ್ಪಿನ ಬೆಟಗೇರಿ ಮಾರ್ಗವಾಗಿ ಬೈಲಹೊಂಗಲಕ್ಕೂ ಇದೇ ಮಾರ್ಗ. ನಿತ್ಯ ನೂರಾರು ಬೈಕ್, ವಾಹನ, ಬಸ್‌ಗಳು ಇದೇ ಮಾರ್ಗವಾಗಿ ಓಡಾಡುತ್ತವೆ.
ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸೇತುವೆ ಮೇಲೆ ನೀರು ಹರಿಯುತ್ತದೆ. ಹಳ್ಳದ ನೀರು ಸಂಪೂರ್ಣ ಕಡಿಮೆಯಾಗುವವರೆಗೆ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ. ಕೆಲವೊಮ್ಮೆ 2- 3 ಗಂಟೆ ಕಾಲ ವಾಹನಗಳು ನಿಂತ ಉದಾಹರಣೆ ಇದೆ. ಮೈ ಮರೆತು ವಾಹನ ಚಲಾಯಿಸಿದರೆ ನೀರು ಪಾಲಾಗುವುದು ಖಚಿತ. ಇಳಿಜಾರು ಮತ್ತು ತಿರುವಿನಲ್ಲಿ ಹಳ್ಳವಿದ್ದು, ಲೋಕೋಪಯೋಗಿ ಇಲಾಖೆಯಿಂದ ಒಂದೇ ಒಂದು ಎಚ್ಚರಿಕೆ ಫಲಕವನ್ನೂ ಅಳವಡಿಸಿಲ್ಲ.
ಇಬ್ಬರು ಅದೃಷ್ಟವಶಾತ್ ಪಾರು: ಮಂಗಳವಾರ ಸಂಜೆ ಸುರಿದ ಭಾರಿ ಮಳೆಯಿಂದ ನೀರು ಹಳ್ಳದ ಮೇಲೆ ಹರಿಯುತ್ತಿತ್ತು. ಗಂಟೆಗಟ್ಟಲೇ ಕಾದು ನಿಂತ ಬೈಕ್ ಸವಾರರಿಬ್ಬರು ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆ ಬೈಕ್ ಚಲಾಯಿಸಿದ್ದರು. ಅರ್ಧಕ್ಕೆ ಹೋಗುವಷ್ಟರಲ್ಲಿ ನೀರಿನ ಸೆಳವು ಹೆಚ್ಚಾಗಿ ಇಬ್ಬರೂ ಬಿದ್ದಿದ್ದರು. ಹಿಂದೆ ಇದ್ದ ಗೂಡ್ಸ್ ವಾಹನದಲ್ಲಿದ್ದವು ಯುವಕರಿಬ್ಬರನ್ನು ಮೇಲೆತ್ತಿ ಪ್ರಾಣ ಉಳಿಸಿದ್ದಾರೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಹಾತರಕಿ ಹಳ್ಳದ ಸೇತುವೆಯನ್ನು ಮೇಲಕ್ಕೇರಿಸಬೇಕು ಎಂಬ ಬೇಡಿಕೆ ದಶಕದಿಂದ ಕೇಳಿಬರುತ್ತಿದೆ. ಈ ಹಿಂದೆ ಶಾಸಕರಾಗಿದ್ದ ಅಮೃತ ದೇಸಾಯಿ ಅವರಿಗೆ ಈ ಮಾರ್ಗದ ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದ್ದರು. ಲೋಕೋಪಯೋಗಿ ಇಲಾಖೆ ಅಽಕಾರಿಗಳು 2- 3 ಬಾರಿ ಸರ್ವೇ ಕೂಡ ಮಾಡಿ ಹೋಗಿದ್ದರು. ಇದೀಗ ವಿನಯ ಕುಲಕರ್ಣಿ ಶಾಸಕರಾಗಿದ್ದು, ಅವರಾದರೂ ಇತ್ತ ಗಮನ ಹರಿಸಲಿ ಎಂಬುದು ಗ್ರಾಮಸ್ಥರ ಆಗ್ರಹ.