ಪ್ರಜ್ವಲ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಶಾಸಕ ಬೇಳೂರು ಅಸಮಾಧಾನ

mla belur gopalkrishan
ಶಿವಮೊಗ್ಗದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು.
Published on

ಶಿವಮೊಗ್ಗ: ಸಂಸದ ಪ್ರಜ್ವಲ್ ರೇವಣ್ಣ ಬಂಧನ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ವಿಳಂಬ ನೀತಿ ಸರಿಯಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ ಆರೋಪಿಯನ್ನು ಬಂಧಿಸಲು ಈವರೆಗೂ ಆಗಿಲ್ಲ. ಸರ್ಕಾರ ಯಾವ ಕಾರಣಕ್ಕೆ ವಿಳಂಬ ಮಾಡುತ್ತಿದೆಯೋ ಗೊತ್ತಿಲ್ಲ. ಆದರೆ ತಕ್ಷಣವೇ ಆತನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿ ಕರ್ನಾಟಕಕ್ಕೆ ಕರೆತರಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ವಿಧಾನಸಭಾ ಅಧಿವೇಶನ ನಡೆಯುತ್ತಿದ್ದಾಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಜೇಬಿನಲ್ಲಿದ್ದ ಪೆನ್ ಡ್ರೈವ್ ತೋರಿಸುತ್ತಿದ್ದರೇ ಹೊರತು ಅದನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಲಿಲ್ಲ. ಆದರೆ ಈಗ ಪೆನ್‌ಡ್ರೈವ್ ಮಾಡಿದವರೆಲ್ಲರ ವಿರುದ್ಧ ಕೇಸ್ ಹಾಕಿ ಜೈಲಿಗೆ ಕಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ದೂರಿದರು.
ತಾಕತ್ತಿದ್ದರೆ ಸರ್ಕಾರ ಬೀಳಿಸಲಿ:
ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ತಾಕತ್ತು ಮತ್ತು ಧಮ್ಮು ಇದ್ದರೆ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲಿ ನೋಡೋಣ ಎಂದು ಗೋಪಾಲಕೃಷ್ಣ ಬೇಳೂರು ಸವಾಲು ಹಾಕಿದರು. ನಮ್ಮ ಶಾಸಕರು ಈ ಬಾರಿ ಬಲಿಷ್ಠವಾಗಿದ್ದಾರೆ. ಕಳೆದ ಬಾರಿ ಯಾರೋ 17 ಮಂದಿ ಹೋದರು. ಆದರೆ ಈ ಬಾರಿ ಯಾರೂ ಹೋಗುವುದಿಲ್ಲ. ಬಿಜೆಪಿ ಮೋಸದಾಟ ಇನ್ಮುಂದೆ ನಡೆಯುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರಲು ಸರ್ಕಾರ ಬೀಳಿಸುವ ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ಬಳಿಕ ಬಿಜೆಪಿಯವರು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಕೊಲೆಗಡುಕರ ಸರ್ಕಾರವಾಗಿದೆ ಎಂದು ಘೋಷಣೆ ಕೂಗಿದರು. ಹಾಗಾದರೆ ಶಿವಮೊಗ್ಗದಲ್ಲಿ ಹರ್ಷನ ಕೊಲೆ ನಡೆದಾಗ ಬಿಜೆಪಿ ಸರ್ಕಾರವೇ ಇತ್ತಲ್ಲವೇ? ಕೇಸ್‌ಗಳನ್ನು ಮುಚ್ಚಿಹಾಕುವ ಸಲುವಾಗಿ ಬಿಜೆಪಿಯವರು ಎಲ್ಲದ್ದನ್ನೂ ಸಿಬಿಐಗೆ ಕೊಡುವಂತೆ ಒತ್ತಾಯಿಸುತ್ತಾರೆ.ಬೇಳೂರು ಗೋಪಾಲಕೃಷ್ಣ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net