

ಮಂಡ್ಯ: ನಗರಸಭೆಯಲ್ಲಿ ಇ-ಖಾತೆ ಮಾಡಿಕೊಡಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಸಹಾಯಕ ಅಧಿಕಾರಿ ಡಾ.ರೋಹಿಣಿ ಅವರಿಗೆ ಮನವಿ ಸಲ್ಲಿಸಿದರು. ನಗರಸಭೆಯಲ್ಲಿ ಅನಧಿಕೃತ ಸ್ವತ್ತುಗಳಿಗೆ ಇ-ಖಾತೆ ಮಾಡಲು ಆಗುತ್ತಿರುವ ಲೋಪ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೆ ಇ-ಖಾತೆ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ. ಅದರಂತೆ ಆಸ್ತಿ ಮಾಲೀಕರು ಕಂದಾಯ ಪಾವತಿಸಿ ಈ ಖಾತೆ ಪಡೆಯಬಹುದು. ಆದರೆ ಖಾತೆ ಮಾಡಿಕೊಡಲು ಪೌರಾಡಳಿತ ಸಚಿವ ರಹೀಂ ಖಾನ್ ಸ್ಥಳೀಯ ಸಂಸ್ಥೆಗಳಿಗೆ ಆದೇಶ ಮಾಡಿದ್ದು, ಆದರೂ ಇದನ್ನು ನಿರ್ಲಕ್ಷಿೃಸಲಾಗಿದೆ ಎಂದು ಆರೋಪಿಸಿದರು.
ನಗರಸಭೆಯಲ್ಲಿ ಇ-ಖಾತೆ ಮಾಡಿಕೊಡಲು ವಿಳಂಬ ಮಾಡುತ್ತಿರುವುದು ಏಕೆ?. ಅಧಿಕಾರಿಗಳು ಮತ್ತು ನೌಕರರು ನಗರಸಭೆ ನೀಡಿರುವ ಅನುಮೋದನೆಗೆ ಖಾತೆ ಮಾಡುತ್ತಿಲ್ಲ. ಸಮರ್ಪಕ ಚೆಕ್ ಬಂದಿ ಹಾಕದೆ ಖಾತೆ ಮಾಡುತ್ತಿದ್ದಾರೆ. 13 ವರ್ಷದ ಇಸಿ ನೀಡಿದ್ದರೂ ಸಹ ಮತ್ತೆ ಹಳೆಯ ಇಸಿ ಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ವಾರಸುದಾರರಿಗೆ ಅಲ್ಲದೆ ಕಂದಾಯವನ್ನು ಹೆಚ್ಚುವರಿಯಾಗಿ ಪಡೆಯುತ್ತಿದ್ದಾರೆ. ನಿಯಮಾನುಸರ ಅರ್ಜಿಯಲ್ಲಿ ಲೋಪ ದೋಷವಿದ್ದಲ್ಲಿ ಏಳು ದಿನಗಳೊಳಗಾಗಿ ಹಿಂಬರಹ ನೀಡದೆ ವಿಳಂಬ ಮಾಡುತ್ತಿದ್ದಾರೆ. ನಗರಸಭೆಯಲ್ಲಿ ಖಾತೆ ಮಾಡುವುದರಲ್ಲಿ ಅಧಿಕಾರಿಗಳಿಗಿಂತ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ಎರಡು ತಿಂಗಳು ಇ-ಖಾತೆ ಅಭಿಯಾನವನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ನಾಮನಿರ್ದೇಶಿತ ಸದಸ್ಯ ಶಿವಕುಮಾರ್, ಕಾರ್ಯಕರ್ತರಾದ ಸುನೀಲ್ಕುಮಾರ್, ಮಂಜುನಾಥ್, ಪ್ರಸನ್ನಕುಮಾರ್, ಸಚಿನ್, ಚಂದ್ರಶೇಖರ್ ಇದ್ದರು.