

ಹುನಗುಂದ: ಕಚೇರಿ ಕೆಲಸ ಮತ್ತು ವಾರ್ಡ್‌ಗಳಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯದಲ್ಲಿ ಪುರಸಭೆ ಅಧಿಕಾರಿಗಳು ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ಸದಸ್ಯ ಮಹೇಶ ಬೆಳ್ಳಿಹಾಳ ಆರೋಪಿಸಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸಿಟಿ ಸರ್ವೇ ವ್ಯಾಪ್ತಿಯ ಪುರಸಭೆ ಹದ್ದಿಯಲ್ಲಿ ಬರುವಂತಹ ಆಸ್ತಿಗಳ ದಾಖಲೆಗಳನ್ನು ಜನರಿಗೆ ನೀಡುತ್ತಿಲ್ಲ. ಒಬ್ಬರಿಂದ ಮತ್ತೊಬ್ಬರಿಗೆ ಆಸ್ತಿ ವರ್ಗಾವಣೆ ಮತ್ತು ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು, ಜತೆಗೆ ಇನ್ನಿತರ ಕೆಲಸ ಕಾರ್ಯಗಳಿಗೆ ಬೇಕಾಗುವ ದಾಖಲೆಗಳನ್ನು ಅಧಿಕಾರಿ ವರ್ಗ ನೀಡದೆ ವಿನಾಕಾರಣ ಸಾರ್ವಜನಿಕರನ್ನು ಸತಾಯಿಸುತ್ತಿದ್ದಾರೆ ಎಂದರು.
ಒಬ್ಬ ಚುನಾಯಿತ ಸದಸ್ಯನಾದ ನನಗೆ ಅಧಿಕಾರಿಗಳು ನೀಡುವ ಕಿರಿಕಿರಿಯಿಂದ ಮನನೊಂದಿದ್ದೇನೆ. ಇದರಿಂದ ನನ್ನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೆ ಅದಕ್ಕೆ ಮುಖ್ಯಾಧಿಕಾರಿಗಳೇ ಹೊಣೆ ಎಂದು ತಮ್ಮ ನೋವನ್ನು ಸಭೆ ಮುಂದಿಟ್ಟರು.
ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಮಾತನಾಡಿ, ಉತಾರ ಸೇರಿ ಸಾರ್ವಜನಿಕರಿಗೆ ಬೇಕಾಗುವ ಇನ್ನಿತರ ಕಾಗದ ಪತ್ರಗಳನ್ನು ನಿಯಮದಂತೆ ತಲುಪಿಸುವಲ್ಲಿ ಯಾವುದಕ್ಕೂ ವಿಳಂಬ ನೀತಿ ಅನುಸರಿಸಬಾರದು. ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿವೆ. ಆ ಸ್ಥಳಗಳಲ್ಲಿ ತೊಂದರೆ ಆಗದಂತೆ ಸರಿಯಾಗಿ ನೀರು ಸರಬರಾಜು ಮಾಡಬೇಕೆಂದು ಸಿಬ್ಬಂದಿಗೆ ಸೂಚಿಸಿದರು.
ಶಾಂತಪ್ಪ ಹೊಸಮನಿ ಮಾತನಾಡಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಾತೀತವಾಗಿ ನಗರದ 23 ವಾರ್ಡ್‌ಗಳ ಅಭಿವೃದ್ಧಿಯತ್ತ ಗಮನ ಹರಿಸಬೇಕೆಂದು ಅಧ್ಯಕ್ಷರಿಗೆ ಮನವಿ ಮಾಡಿದರು. ನಗರದಲ್ಲಿ ಸಣ್ಣ-ಪುಟ್ಟ ಕೆಲಸಗಳಿಗೆ ಗರಿಷ್ಠ ಪ್ರಮಾಣದ ಹಣ ಖರ್ಚು ಹಾಕಿದ್ದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದರು.
ಸಭೆಯಲ್ಲಿ ಪ್ರಸಕ್ತ ಸಾಲಿನ ವಿವಿಧ ಯೋಜನೆ ಅಡಿಯಲ್ಲಿ ಹಂಚಿಕೆಯಾದ ಅನುದಾನದಲ್ಲಿ ತಯಾರಿಸಲಾದ ಕ್ರಿಯಾಯೋಜನೆಗಳಿಗೆ ಮಂಜೂರು ನೀಡಲಾಯಿತು. ಸಭಾಭವನಕ್ಕೆ ಪೀಠೋಪಕರಣ ಒದಗಿಸುವ ಕುರಿತು ಚರ್ಚಿಸಲಾಯಿತು. ಸ್ಥಾಯಿ ಸಮಿತಿ ಸಭಾಪತಿಯಾಗಿ ಯಲ್ಲಪ್ಪ ನಡುವಿನಮನಿ ಅವರನ್ನು ಆಯ್ಕೆ ಮಾಡಿ ಗೌರವಿಸಲಾಯಿತು.
ಉಪಾಧ್ಯಕ್ಷೆ ರಾಜಮ್ಮ ಬಾದಾಮಿ, ಸದಸ್ಯರಾದ ಚಂದಪ್ಪ ಕಡಿವಾಲ, ಚಂದ್ರಪ್ಪ ತಳವಾರ, ಮೈನು ಧನ್ನೂರ, ಬಸಮ್ಮ ಚಿತ್ತವಾಡಗಿ, ಗುರುಬಾಯಿ ಹೂಗಾರ, ಖೈರೂನಬಿ ನಾಯಕ, ಸುಜಾತಾ ದೇಶಪಾಂಡೆ, ಮಲ್ಲಣ್ಣ ಅಂಟರದಾನಿ, ಕಮಲವ್ವ ಸಂದಿಮನಿ, ರಾಜು ಹಡಪದ, ಗಿರಿಜಮ್ಮ ಮಠ, ಗುರುಲಿಂಗಪ್ಪ ಇಂಗಳಗಿ, ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಮ್ಯಾನೇಜರ್ ಮುತ್ತಣ್ಣ ಕಳ್ಳಿಗುಡ್ಡ ಮತ್ತಿತರರಿದ್ದರು.