ಬನಹಳ್ಳಿ ಕೆರೆಗೆ ಬೇಕಿದೆ ಕಾಯಕಲ್ಪ : ಹೂಳು ತುಂಬಿದ ಜಲಮೂಲ

c5a296a1-5a23-49b3-8c10-2525c86f9309
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ
ಹೊಸಕೋಟೆ ತಾಲೂಕಿನಲ್ಲಿ ಅಬ್ಬರಿಸುತ್ತಿರುವ ಮಳೆರಾಯನ ಕೃಪೆಯಿಂದ ಹತ್ತಾರು ವರ್ಷದಿಂದ ಬತ್ತಿಹೋಗಿದ್ದ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ, ಸ್ಥಳೀಯ ಜನಪ್ರತಿನಿಧಿಗಳು ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸಲು ಸ್ಪರ್ಧೆಗೆ ಬಿದ್ದಿರುವ ದೃಶ್ಯಗಳು ಸಾಮಾನ್ಯವಾಗಿವೆ. ಆದರೆ ಕೆರೆಗಳ ಅಭಿವೃದ್ಧಿ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಪರಿಣಾಮವಾಗಿ ತಾಲೂಕಿನಲ್ಲಿ ಬಹಳಷ್ಟು ಕೆರೆಗಳ ಒಡಲು ಹೂಳಿನಿಂದ ತುಂಬಿಹೋಗಿದೆ.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಅವಕೃಪೆಗೆ ತುತ್ತಾಗಿರುವ ಹಲವು ಕೆರೆಗಳಲ್ಲಿ ಬನಹಳ್ಳಿ ಕೆರೆಯೂ ಒಂದು. ಹೊಸಕೋಟೆ ತಾಲೂಕು ನಂದಗುಡಿ ಹೋಬಳಿ ವ್ಯಾಪ್ತಿಯ ಹಿಂಡಿಗನಾಳ ಹಾಗೂ ಬನಹಳ್ಳಿ ಗ್ರಾಮಕ್ಕೆ ಹೊಂದಿ ಕೊಂಡಿರುವ ನೂರಾರು ವರ್ಷದ ಹಳೇಯದಾದ ಬನಹಳ್ಳಿ ಕೆರೆ ಒಡಲು ಹೂಳಿನಿಂದ ತುಂಬಿಹೋಗಿದೆ. ಈ ಭಾಗದಲ್ಲಿ ಹಿಂದಿನಿಂದಲೂ ಅಂತರ್ಜಲ ಮಟ್ಟ ಕೊರತೆಯಿಂದ ಸಾವಿರಾರು ಅಡಿ ಕೊರೆದರೂ ಕೊಳವೆಬಾವಿಗಳಲ್ಲಿ ನೀರು ಸಿಗುವುದೇ ದುಸ್ತರ ಎಂಬಂತ ಪರಿಸ್ಥಿತಿ ಇದೆ. ಇರುವ ಜಲಮೂಲಗಳ ರಕ್ಷಣೆಯೂ ಇಲ್ಲದೆ ಸ್ಥಳೀಯ ರೈತರು ಪರದಾಡುವಂತಾಗಿದೆ.

ಗಿಡ-ಗಂಟಿಗಳಿಂದ ಆವೃತ
ಹಿಂಡಿಗನಾಳ ಹಾಗೂ ಬನಹಳ್ಳಿ ಇವೆರಡೂ ಗ್ರಾಮಕ್ಕೆ ಹೊಂದಿಕೊಂಡಿರುವ ಈ ಕೆರೆ ಈ ಗ್ರಾಮಗಳ ಪ್ರಮುಖ ಜಲಮೂಲವಾಗಿದೆ, ಆದರೆ ಕೆರೆ ಭಾಗಶಃ ಹೂಳಿನಿಂದ ಮುಚ್ಚಿಹೋಗಿದೆ. ಇದುವರೆಗೆ ಪಂಚಾಯಿತಿಯಾಗಲಿ ಅಥವಾ ಸಂಬಂಧಪಟ್ಟ ಯಾವ ಅಧಿಕಾರಿಗಳಾಗಲಿ ಕೆರೆ ಹೂಳು ತೆಗೆದು ಅಭಿವೃದ್ಧಿಪಡಿಸುವ ಬಗ್ಗೆ ಕಾಳಜಿ ವಹಿಸಿಲ್ಲ. ಇತ್ತೀಚಿಗೆ ಸುರಿದ ಮಳೆಯಿಂದಾಗಿ ಕೆರೆಯಲ್ಲಿ ನೀರು ಸಂಗ್ರಹವಾಗಿದೆ. ಆದರೆ ಅಷ್ಟೇ ದೊಡ್ಡಮಟ್ಟದಲ್ಲಿ ಕೆರೆ ಅಂಗಳದಲ್ಲಿ ಜಾಲಿಮರಗಳು ಹಾಗೂ ಕಳೆಗಿಡಗಂಟಿಗಳು ಬೆಳೆದು ನಿಂತಿವೆ. ಇದರಿಂದ ನೀರಿನ ಸಂಗ್ರಹ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿದೆ. ಗಿಡಗಂಟಿಗಳನ್ನು ತೆರವುಗೊಳಿಸಿ, ಸಮರ್ಪಕವಾಗಿ ಹೂಳು ತೆಗೆದಿದ್ದರೆ ಕೆರೆಯಲ್ಲಿ ಪ್ರಸ್ತುತ ಶೇಖರಣೆಯಾಗಿರುವ ನೀರಿಗಿಂತ ದುಪ್ಪಟ್ಟು ನೀರು ಸಂಗ್ರಹವಾಗುತ್ತಿತ್ತು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಕೊಳವೆಬಾವಿಗಳಲ್ಲಿ ಜೀವಕಳೆ
ಕಳೆದ ಕೆಲ ತಿಂಗಳಿಂದ ಸುರಿಯುತ್ತಿರುವ ಮಳೆಗೆ ಈ ಭಾಗದಲ್ಲಿ ಅಂತರ್ಜಲ ಮಟ್ಟ ಸುಧಾರಣೆಯಾಗಿದೆ, ಕೆರೆಗೆ ನೀರು ಬಂದ ಬಳಿಕ ಈ ಭಾಗದಲ್ಲಿ ಬತ್ತಿಹೋಗಿದ್ದ ಕೊಳವೆಬಾವಿಗಳೂ ರೀ ಚಾರ್ಜ್ ಆಗಿವೆ. ಇದರಿಂದ ರೈತಾಪಿ ವರ್ಗದವರು ಸಂತಸಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದಾರೆ. ಹೂಳಿನಿಂದ ತುಂಬಿಕೊಂಡಿರುವ ಕೆರೆಯಲ್ಲಿನ ನೀರು ಬೇಸಿಗೆಯಷ್ಟರಲ್ಲಿ ಇಂಗಿಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ಮುಂದಿನ ದಿನಗಳಲ್ಲಿ ಕೆರೆಗಳಲ್ಲಿನ ಜಾಲಿಮರ ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಿ ಕೆರೆಯಲ್ಲಿನ ಹೂಳು ತೆಗೆಸಿ ಜಲಮೂಲ ಸಂರಕ್ಷಣೆಗೆ ಗಮನ ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಹಿಂಡಿಗನಾಳ ಹಾಗೂ ಬನಹಳ್ಳಿಗೆ ಹೊಂದಿಕೊಂಡಿರುವ ಬನಹಳ್ಳಿ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ನೀರಿನ ಶೇಖರಣೆಗೆ ತೊಡಕಾಗಿದೆ, ಅಲ್ಲದೆ ಕೆರೆಯ ತುಂಬೆಲ್ಲ ಜಾಲಿಮರ ಹಾಗೂ ಕಳೆಗಿಡಗಳು ಬೆಳೆದು ನಿಂತಿದ್ದು, ಕೆರೆ ಅವ್ಯವಸ್ಥೆಗೆ ಕಾರಣವಾಗಿದೆ. ಸಂಬಂಧಪಟ್ಟವರು ಕೆರೆ ಅಭಿವೃದ್ಧಿಗೆ ಗಮನ ನೀಡಿದರೆ ಈ ಭಾಗದ ರೈತಾಪಿ ವರ್ಗದವರಿಗೆ ವರದಾನವಾಗಲಿದೆ.
ಎನ್.ವಿ.ಅನಂತಪದ್ಮನಾಭನ್
ಬನಹಳ್ಳಿ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net