ರೈತರನ್ನು ಉದ್ಯಮಿಗಳನ್ನಾಗಿಸಲು ನಿರ್ಲಕ್ಷೃ: ಡಾ.ಮಹಾಂತೇಶ್ ಬಿ.ಪಾಟೀಲ್ ಬೇಸರ

DSC_6539
Published on

ಸುತ್ತೂರು: ಎಲ್ಲರೂ ರೈತರ ಬಗ್ಗೆ ಮಾತನಾಡುತ್ತಾ ಉತ್ಸವ ಮೂರ್ತಿ ಮಾಡುತ್ತಿದ್ದೇವೆಯೇ ವಿನಾ ರೈತನನ್ನು ಉದ್ಯಮಿಯನ್ನಾಗಿ ಮಾಡುತ್ತಿಲ್ಲ ಎಂದು ಕೊಪ್ಪಳ ಅಯೋಧ್ಯ ಕ್ರಾಫ್ ಅಕಾಡೆಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಮಹಾಂತೇಶ್ ಬಿ.ಪಾಟೀಲ್ ಬೇಸರ ವ್ಯಕ್ತಪಡಿಸಿದರು.

ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಬುಧವಾರ ಆಯೋಜಿಸಿದ್ದ ಕೃಷಿ ವಿಚಾರಸಂಕಿರಣದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಸಂವೇದನೆ ಆಧಾರಿತ ಸಸ್ಯ ಸಂರಕ್ಷಣೆ ವಿಷಯ ಕುರಿತು ಮಾತನಾಡಿದರು.

ದೇಶಕ್ಕೆ ಅನ್ನ ನೀಡುವ ರೈತನನ್ನು ಎಲ್ಲರೂ ಹಾಡಿ ಹೊಗಳಿ ಬೆನ್ನೆಲುಬು ಎನ್ನುವ ಮೂಲಕ ಆತನನ್ನು ಉತ್ಸವ ಮೂರ್ತಿ ಮಾಡುತ್ತಿದ್ದೇವೆ. ಆದರೆ ರೈತರನ್ನು ಕೇವಲ ಉತ್ಸವ ಮೂರ್ತಿ ಮಾಡದೆ ಉದ್ಯಮಿಗಳನ್ನಾಗಿ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಬದಲಾದ ಕಾಲಘಟ್ಟದಲ್ಲಿ ಒಕ್ಕಲುತನದ ಸಂವೇದನೆ ಹೊರಟು ಹೋಗುತ್ತಿದೆ. ಆದ ಕಾರಣ ಹೊಸ ಹೊಸ ತಂತ್ರಜ್ಞಾನ ಬರುತ್ತಿದೆ. ಇದರಿಂದ ನಮ್ಮ ಕೃಷಿ ಪರಿಚಯ, ಭೂಮಿ ಪರಿಚಯ, ಬೆಳೆ ಪರಿಚಯದ ಕೊಂಡಿ ಕಳಚುತ್ತಿದೆ. ನಾವು ಬಳಸುತ್ತಿರುವ ಕಳೆನಾಶಕ, ಕೀಟನಾಶಕದಿಂದ ಸಂವೇದನೆ ಕಳೆದಿದೆ. ಇಂದು ಶೇ.30ರಷ್ಟು ರೈತರು ಮಾತ್ರ ರೈತರಾಗಿ ಉಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಸಾಕಷ್ಟು ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿದ್ದಾರೆ. ಪರಿಣಾಮ, ಇಂದು ಪರರ ಅವಲಂಬನೆ ಹೆಚ್ಚಿದೆ ಎಂದರು.

ನಾಟಿ ಮಾಡುವಾಗ ಮತ್ತು ಬೆಳೆ ಕೊಯ್ಯುವಾಗ ಮಾತ್ರ ರೈತ ಹೊಲದಲ್ಲಿ ಕಾಣುತ್ತಾನೆ. ಮಿಕ್ಕಂತೆ ಕೀಟನಾಶಕಗಳು ಮಾತನಾಡುತ್ತಿವೆ. ಅಂಗಡಿಯವರು ಹೇಳಿದ ಕ್ರಿಮಿನಾಶಕ, ರಾಸಾಯನಿಕಕ್ಕೆ ಮಾರು ಹೋಗುತ್ತಿದ್ದೇವೆ. ನಿಖರ ಕೃಷಿ ಅಂದರೆ ಸರಳವಾಗಿ ಮಾಡುವ ಕೃಷಿಯನ್ನು ಉತ್ತೇಜಿಸುವುದು. ಇಂದು ಸಹ ಹೊಲದಲ್ಲಿ ನಮ್ಮ ಹಾಜರಾತಿ ಕಡಿಮೆ ಆಗುತ್ತಿದ್ದು, ರೈತ ಕೃಷಿ, ಪರಿಸರದೊಂದಿಗೆ ಸಂವೇದನೆ ಕಳೆದುಕೊಂಡಿದ್ದಾನೆ ಎಂದರು.

ನಾವು ನಮ್ಮ ಬೆಳೆಗಳಿಗೆ ಎಲ್ಲಿಯವರೆಗೆ ಅಂತಾರಾಷ್ಟ್ರೀಯ ಮಟ್ಟದ ದರ ತೆಗೆದುಕೊಳ್ಳುವುದಿಲ್ಲವೋ ಅಲ್ಲಿವರೆಗೆ ನಾವು ಗುಣಮಟ್ಟದ ಬೆಳೆ ಬೆಳೆಯಲು ಸಾಧ್ಯವಿಲ್ಲ. ಕೀಟ, ಕಳೆ, ಕ್ರಿಮಿ ಎಂಬ ಅಂಶ ಇಂದು ರೈತರ ಬದುಕನ್ನು ಹರಣ ಮಾಡಿವೆ ಎಂದು ಆತಂಕವ್ಯಕ್ತಪಡಿಸಿದರು.

ಇಂದು ಒಂದು ಕೆಜಿ ಭತ್ತ ತೆಗೆಯಲು 3500 ಲೀ. ನೀರು ಖರ್ಚಾಗುತ್ತಿದೆ. ನೀರಿನ ಜ್ಞಾನ, ಕ್ರಿಮಿನಾಶ, ರಸಗೊಬ್ಬರ ಪರಿವೇ ಇಲ್ಲದೆ ಬಳಸುವುದರಿಂದ ಹೆಚ್ಚು ವೆಚ್ಚ, ಸೂಕ್ತ ಸಂವೇದನೆ ಇಲ್ಲದಂತಾಗಿದೆ ಎಂದರು.

ಸುತ್ತೂರು ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಾರಾಣಸಿ ಕಾಶಿ ಜ್ಞಾನ ಸಿಂಹಾಸನ ಮಠದ ಡಾ.ಶ್ರೀಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪುಷ್ಪಗಿರಿ ಸಂಸ್ಥಾನ ಮಠದ ಶ್ರೀಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಶುಭ ಸಂದೇಶ ನೀಡಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಈಶ್ವರ ಖಂಡ್ರೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಅರವಿಂದ ಬೆಲ್ಲದ, ಶಾಸಕರಾದ ಸಿ.ಸಿ.ಪಾಟೀಲ್, ಸಿ.ಟಿ.ರವಿ, ಮಾಜಿ ಸಚಿವ ಬಿ.ಸಿ.ಪಾಟೀಲ್, ಉದ್ಯಮಿ ಮಾದಯ್ಯ ಪುಟ್ಟಸ್ವಾಮಿ, ಡಾ.ಸುರೇಶ, ಸಂಸದ ಶ್ರೇಯಸ್ ಪಟೇಲ್, ಕೆಪಿಎಸ್‌ಸಿ ಸದಸ್ಯ ಪ್ರಭುದೇವ, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net