ನರಗುಂದ ಮತಕ್ಷೇತ್ರದ ಅಭಿವೃದ್ಧಿಗೆ ನಿರ್ಲಕ್ಷ್ಯ

6-gdg-6
Published on

ಗದಗ: ನರಗುಂದ ವಿಧಾನಸಭೆ ಮತಕ್ಷೇತ್ರದ ಅಭಿವೃದ್ಧಿ ಕುರಿತಂತೆ ನಿರ್ಲಕ್ಷ್ಯ ತೋರುತ್ತಿರುವುದನ್ನು ಖಂಡಿಸಿ ನರಗುಂದ ಮತ್ತು ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಸುಂದರೇಶಬಾಬು ಅವರಿಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ ಬಿ.ಆರ್. ಯಾವಗಲ್ ನೇತೃತ್ವದಲ್ಲಿ ಹೊಳೆಆಲೂರಿನಿಂದ ಪಾದಯಾತ್ರೆಯಲ್ಲಿ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಈ ಮನವಿ ನೀಡಿದರು.
ನರಗುಂದ ಮತಕ್ಷೇತ್ರದ ಜನ ಸಾಮಾನ್ಯರು ಕಳೆದ ನಾಲ್ಕು ವರ್ಷಗಳಿಂದ ಅಭಿವೃದ್ಧಿ ಕೆಲಸಗಳಿಂದ ವಂಚಿತರಾಗಿ ಬಿಜೆಪಿ ಪೊಳ್ಳು ಭರವಸೆ ನಂಬಿ ಭ್ರಮನಿರಸನಗೊಂಡಿದ್ದಾರೆ. ಕೇಂದ್ರ, ರಾಜ್ಯ ಹಾಗೂ ಗೋವಾದಲ್ಲಿ ಬಿಜೆಪಿಯ ಸರ್ಕಾರವಿದ್ದರೂ ಈ ಭಾಗದ ರೈತರ ಬಹುದಿನಗಳ ಕನಸಿನ ಯೋಜನೆಯಾದ ಮಹದಾಯಿ ನೀರಿಗಾಗಿ ವಿಳಂಬ ಧೋರಣೆ ತಾಳಲು ಕಾರಣವಾದರೂ ಏನು?. ಮುಖ್ಯವಾಗಿ ಮಹದಾಯಿ ನದಿ ಜೋಡಣಾ ಯೋಜನೆ ಅನುಷ್ಠಾನವಾಗಬೇಕು. ನರಗುಂದ ಪಟ್ಟಣದ ಬಡವರಿಗಾಗಿ 110 ಕೋಟಿ ರೂ. ವೆಚ್ಚದಲ್ಲಿ 2 ಸಾವಿರ ಮನೆಗಳ ನಿರ್ವಣದ ಆಶ್ರಯ ಯೋಜನೆ ಅನುಷ್ಠಾನವಾಗಬೇಕು. ಇಂಜಿನಿಯರಿಂಗ್ ಕಾಲೇಜ್ ಕಟ್ಟಡ ಕೆಲಸ ಶೀಘ್ರ ಪೂರ್ಣಗೊಳಿಸಬೇಕು. ಗಾಡಗೋಳಿ, ಹೊಳೆಮಣ್ಣೂರ, ಹೊಳೆ ಹಡಗಲಿ, ಬಿ.ಎಸ್. ಬೇಲೇರಿ ಸೇರಿ ನರಗುಂದ ವಿಧಾನಸಭೆ ಮತಕ್ಷೇತ್ರದ 17 ನವ ಗ್ರಾಮಗಳ ಮನೆ ಹಂಚಿಕೆ 11 ವರ್ಷವಾದರೂ ಏಕೆ ಆಗಿಲ್ಲ? ಕೊಣ್ಣೂರ ಗ್ರಾಮದಲ್ಲಿ ಮಂಜೂರಾತಿ ಆದ ಮುರಾರ್ಜಿ ವಸತಿ ಶಾಲೆ ಕಾಮಗಾರಿ ಏಕೆ ಆರಂಭವಾಗಿಲ್ಲ? ಹೊಳೆಆಲೂರಿನ ಕುಡಿಯುವ ನೀರು ಹಾಗೂ ರೈತರಿಗೆ ಅನುಕೂಲವಾಗಲೆಂದು ಮಂಜೂರಾತಿಯಾಗಿದ್ದ 3.5 ಕೋಟಿ ರೂ ವೆಚ್ಚದ ಬ್ಯಾರೇಜ್ ನನೆಗುದಿಗೆ ಬಿದ್ದಿದೆ ಏಕೆ? ಎಂದು ಮನವಿಯಲ್ಲಿ ತಿಳಿಸಲಾಗಿದೆ. ಶೀಘ್ರದಲ್ಲಿ ಸರ್ಕಾರವು ನರಗುಂದ ವಿಧಾನಸಭೆ ಮತಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಜನಾಂದೋಲನ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಮಾಜಿ ಶಾಸಕ ಬಿ.ಆರ್. ಯಾವಗಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಪ್ರವೀಣ ಯಾವಗಲ್. ವಿವೇಕ ಯಾವಗಲ್, ಎಂ.ಬಿ. ಕೋಳೇರಿ, ಉಮರ್ ಫಾರೂಕ್ ಹುಬ್ಬಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net