

ಸಿಂದಗಿ: ಕನ್ನಡ ಸಾರಸ್ವತ ಲೋಕದ ಬಹುತೇಕ ಸಾಹಿತ್ಯ ಪ್ರಕಾರಗಳಿಗೆ ಮನ್ನಣೆ ಸಿಗುತ್ತಿದೆ. ಆದರೆ, ಮಕ್ಕಳ ಸಾಹಿತ್ಯಕ್ಕೆ ಎಲ್ಲೆಡೆ ನಿರ್ಲಕ್ಷೃ ತೋರಲಾಗುತ್ತಿದೆ ಎಂದು ಬೆಳಗಾವಿ ಜಿಲ್ಲೆಯ ಮೂಡಲಗಿಯ ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ ವಿಷಾಧ ವ್ಯಕ್ತಪಡಿಸಿದರು.
ಪಟ್ಟಣದ ಸಾರಂಗ ಮಠದ ಸಭಾ ಮಂಟಪದಲ್ಲಿ ಪೂಜ್ಯ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ, ವಿದ್ಯಾಚೇತನ ಪ್ರಕಾಶನದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸದ್ವಿಚಾರ ಗೋಷ್ಠಿ 343, ಮಹಾಪ್ರಬಂಧ ಗ್ರಂಥ ಬಿಡುಗಡೆ, ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯನ್ನೇ ಮಕ್ಕಳ ಸಾಹಿತ್ಯದ ತೊಟ್ಟಿಲನ್ನಾಗಿಸಿದ ಕೀರ್ತಿಯ ಮಕ್ಕಳ ಸಾಹಿತಿ ಶಂ.ಗು. ಬಿರಾದಾರ ಅವರು ಬರೆದ ನಾವು ಗೆಳೆಯರು...ನಾವು ಗೆಳೆಯರು...ಹೃದಯ ಹೂವಿನ ಹಂದರ ಎಂಬ ಮಕ್ಕಳ ಗೀತೆಯು ನೆರೆ ರಾಜ್ಯದ ತೆಲಗು ಭಾಷೆಗೂ ಅನುವಾದಗೊಂಡು ರಾಷ್ಟ್ರ ಪ್ರಶಸ್ತಿ ಪಡೆದಿದೆ. ಮಕ್ಕಳ ಸಾಹಿತ್ಯ ಪ್ರಸಾರಕ್ಕಾಗಿ ಭಾರತೀಯ ಸಾಹಿತ್ಯ ಭಂಡಾರ ಸ್ಥಾಪನೆ, 1978ರಲ್ಲಿ ಮಕ್ಕಳಿಗಾಗಿ ಬಾಲ ಭಾರತಿ ಪತ್ರಿಕೆ ಆರಂಭಿಸಿದ ಅವರ ಮಕ್ಕಳ ಸಾಹಿತ್ಯ ಕಾಳಜಿಯನ್ನು ನಾವುಗಳು ಎಂದಿಗೂ ಮರೆಯುವಂತಿಲ್ಲ. ಅಲ್ಲದೆ, ಕರ್ನಾಟಕ ಗಾಂಧಿ ಖ್ಯಾತಿಯ ಹರ್ಡೇಕರ ಮಂಜಪ್ಪನವರ ಬುದ್ಧಿಮಾತು ಮಕ್ಕಳ ಸಾಹಿತ್ಯ ಕೃತಿ ಹದಿನೇಳು ಬಾರಿ ಮರು ಮುದ್ರಣಗೊಂಡು ದಾಖಲೆ ತೋರಿದೆ ಎಂದರು.
ಮಕ್ಕಳ ಸಾಹಿತ್ಯ ಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ .ಗು. ಸಿದ್ಧಾಪೂರ, ಇದೀಗ ಪ್ರಾಯೋಜಿತ ಪ್ರಶಸ್ತಿಗಳ ಕಾಲ ಬಂದಿದೆ. ಇಂತಹ ಸಂಘ-ಸಂಸ್ಥೆಗಳು ಎದ್ದು ನಿಂತಿದ್ದರೂ, ವಿದ್ಯಾಚೇತನ ಪ್ರಕಾಶನದ ಸಂಸ್ಥಾಪಕ ಸಂಚಾಲಕ ಹ.ಮ. ಪೂಜಾರ ಗುರುಗಳು ತಮ್ಮ ವಿಶ್ರಾಂತ ವೇತನದಲ್ಲಿನ ಉಳಿತಾಯದ ಹಣವನ್ನು ಮಕ್ಕಳ ಸಾಹಿತ್ಯ ಪ್ರಕಟಣೆ ಮತ್ತು ಪ್ರಸಾರಗಳಿಗೆ ಮೀಸಲಿರಿಸಿರುವುದು ನಮಗೆಲ್ಲರಿಗೂ ಮಾದರಿಯಾಗಿದೆ. ವಿದ್ಯಾಚೇತನ ಪ್ರಕಾಶನ ವತಿಯಿಂದ ಮಕ್ಕಳ ಸಾಹಿತ್ಯಕ್ಕೆ ಹಾಗೂ ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡುತ್ತಿರುವವರಿಗೆ ಪ್ರೋತ್ಸಾಹಿಸುತ್ತಿರುವದು ಮಕ್ಕಳ ಸಾಹಿತ್ಯ ಬೆಳವಣಿಗೆಗೆ ಪೂರಕವಾಗಿದೆ ಎಂದರು. ಅಲ್ಲದೆ, ಪ್ರಶಸ್ತಿಯ ನಗದನ್ನು ವಿದ್ಯಾಚೇತನ ಪ್ರಕಾಶನದ ಮಕ್ಕಳ ಸಾಹಿತ್ಯ ಚಟುವಟಿಕೆಗೆ ಮರಳಿಸಿ ಮಾದರಿಯಾದರು.
ವಿದ್ಯಾಚೇತನ ಪ್ರಕಾಶನ ಸಂಚಾಲಕ ಹ.ಮ. ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿ, ಶೀಘ್ರ ಮಕ್ಕಳ ಬಳಗದ ಸುವರ್ಣ ಮಹೋತ್ಸವವನ್ನು ಆಚರಿಸಲಾಗುವುದು. ಸಾರಂಗಮಠದ ಲಿ. ಚೆನ್ನವೀರ ಸ್ವಾಮೀಜಿ ಅವರು ಶಿಕ್ಷಣ ಸಂಸ್ಥೆ ಕಟ್ಟಿದರು. ಜ್ಞಾನ ಪ್ರಸಾರದ ಜತೆಗೆ ಕೃಷಿ ಚಟುವಟಿಕೆಗೂ ಮಹತ್ವ ನೀಡಿದ್ದರು. ಸಾರಂಗಮಠದ ಪೂಜ್ಯ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಶಿಕಣ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಮೂಲಕ ಜ್ಞಾನ, ಅನ್ನ ದಾಸೋಹ ಮತ್ತು ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಸಿ ಶಿಕ್ಷಣ ದಾಸೋಹ ಮಾಡುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪನ್ಯಾಸಕಿ ಸುಧಾರಾಣಿ ಮಣೂರ ಅವರ ಮಹಾಪ್ರಬಂಧ ಪ.ಗು. ಸಿದ್ದಾಪುರ ಜೀವನ ಮತ್ತು ಸಾಹಿತ್ಯ ಗ್ರಂಥವನ್ನು ಸಾರಂಗಮಠದ ಉತ್ತರಾಧಿಕಾರಿ ಡಾ. ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಎಂ.ಎಚ್. ಲೋಣಿ, ಜಿ.ಜಿ. ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಮಕ್ಕಳ ಸಾಹಿತಿ ಎಸ್.ಎಸ್. ಸಾತಿಹಾಳ ಅವರು ಪ್ರಶಸ್ತಿ ಪತ್ರ ವಾಚಿಸಿದರು.
ಡಾ. ಜಿ.ಎಸ್. ಭೂಸಗೊಂಡ, ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಶರಣು ಜೋಗೂರ, ರಾಜಶೇಖರ ಪೂಜಾರಿ, ಸಿದ್ದಬಸವ ಕುಂಬಾರ, ವಿ.ಡಿ. ವಸದ, ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ, ಎಂ.ಎಸ್. ಹೈಯಾಳಕರ, ವಿ.ಡಿ. ಪಾಟೀಲ, ಎಸ್.ಕೆ. ಗುಗ್ಗರಿ, ಪೂಜಾ ಹಿರೇಮಠ, ಸುಧಾರಾಣಿ ಮಣೂರ ಇದ್ದರು.