ಮಧ್ಯವರ್ತಿಗಳ ಹಾವಳಿ ಕಡಿವಾಣಕ್ಕೆ ನಿರ್ಲಕ್ಷ್ಯ

08 HANUR 2
ಹನೂರಿನಲ್ಲಿ ಛಲವಾದಿ ಮಹಾಸಭಾದಿಂದ ಆಯೋಜಿಸಿದ್ದ ಕುಂದು ಕೊರತೆ ಸಭೆಯಲ್ಲಿ ಅಧ್ಯಕ್ಷ ಬಸವರಾಜು ಮಾತನಾಡಿದರು. ಶ್ರೀಕಂಠಮೂರ್ತಿ, ನಿಂಗರಾಜು, ಪ್ರಭುಸ್ವಾಮಿ ಇತರರು ಇದ್ದರು.
Published on

ಹನೂರು: ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಹೆಚ್ಚಾಗಿರುವ ಮಧ್ಯವರ್ತಿಗಳ ಹಾವಳಿ ಕಡಿವಾಣಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಬಸವರಾಜು ಆರೋಪಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಥಿಗೃಹದ ಸಭಾಂಗಣದಲ್ಲಿ ಶನಿವಾರ ಪದಾಧಿಕಾರಿಗಳೊಂದಿಗೆ ಆಯೋಜಿಸಿದ್ದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

ಹನೂರು ತಾಲೂಕು ಜಿಲ್ಲೆಯಲ್ಲಿಯೇ ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ. ತಾಲೂಕು ರಚನೆಯಾಗಿ 6 ವರ್ಷಗಳು ಕಳೆದರೂ ಅಗತ್ಯ ಮೂಲಸೌಕರ್ಯವಿಲ್ಲದ ಪರಿಣಾಮ ಅಭಿವೃದ್ಧಿ ಕಂಡಿಲ್ಲ. ಹನೂರಿನ ಆಸ್ಪತ್ರೆಯನ್ನು 100 ಹಾಸಿಗೆಯುಳ್ಳ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುತ್ತದೆ ಎಂಬ ಆಶಾಭಾವನೆಯನ್ನು ತಾಲೂಕಿನ ಜನರು ಹೊಂದಿದ್ದರು. ಆದರೆ ಬಜೆಟ್‌ನಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಘೋಷಿಸಲಾಗಿದ್ದು, ಜನರಲ್ಲಿದ್ದ ಆಸೆ ಹುಸಿಯಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ 100 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಿಸಬೇಕಿದೆ ಎಂದು ಹೇಳಿದರು.

ಪ್ರಜಾಸೌಧ ಶೀಘ್ರ ನಿರ್ಮಾಣವಾಗಬೇಕಿದೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಕೊರತೆ ಇರುವ ಕಾರಣ ಕೆಲಸ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದ ಜನರು ತೊಂದರೆ ಪಡುವಂತಾಗಿದೆ. ಕಾಲಕಾಲಕ್ಕೆ ಎಸ್ಸಿ, ಎಸ್ಟಿ ಸಭೆ ನಡೆಯುತ್ತಿಲ್ಲ. ಆದ್ದರಿಂದ ಶಾಸಕರು ಈ ಬಗ್ಗೆ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶ್ರೀಕಂಠಮೂರ್ತಿ, ನಿರ್ದೇಶಕ ನಿಂಗರಾಜು, ಸದಸ್ಯರಾದ ಅಂಕರಾಜು, ಪ್ರಭುಸ್ವಾಮಿ, ಬಸವಲಿಂಗಯ್ಯ ಹಾಗೂ ಮೇಘರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net