

ಬೆಂ.ಗ್ರಾಮಾಂತರ: ವಾರಾಂತ್ಯದ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಂಕಿತ ಪ್ರಕರಣ ದಿನೆದಿನೇ ಹೆಚ್ಚಾಗುತ್ತಿದ್ದರೂ ಸಾರ್ವಜನಿಕರು ಕರೊನಾ ನಿಯಮ ಪಾಲನೆ ನಿರ್ಲಕ್ಷಿಸಿ ಓಡಾಡುತ್ತಿರುವುದು ಕಂಡುಬರುತ್ತಿದೆ.
ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸೋಂಕಿನ ಸರಪಳಿ ತುಂಡರಿಸಲು ಬೆಂಗಳೂರು ಜತೆಗೆ ಗ್ರಾಮಾಂತರ ಜಿಲ್ಲೆಯನ್ನು ಒಂದು ವಾರ ಲಾಕ್‌ಡೌನ್ ಮಾಡಿತ್ತು. ಆ ಸಂದರ್ಭದಲ್ಲೂ ಸಾರ್ವಜನಿಕ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿರಲಿಲ್ಲ. ವಾರಾಂತ್ಯದ ಲಾಕ್‌ಡೌನ್ ಆದೇಶಕ್ಕೂ ಸ್ಪಂದನೆ ದೊರಕದಿರುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.
ನೆಲಮಂಗಲ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ನಗರಗಳಲ್ಲಿ ಎಂದಿನಂತೆ ವಾಹನಗಳು ರಸ್ತೆಗಿಳಿದಿದ್ದ ದೃಶ್ಯ ಕಂಡುಬಂತು. ಬೆಂ.ಹೊರವಲಯ ನೆಲಮಂಗಲ ಹೆದ್ದಾರಿಯಲ್ಲೂ ಇದೇ ದೃಶ್ಯ ಸಾಮಾನ್ಯವಾಗಿತ್ತು.
ಖಾಕಿ ಕೊರತೆ: ಜಿಲ್ಲೆಯಲ್ಲಿ ಹಲವು ಪೊಲೀಸರಿಗೆ ಸೋಂಕು ತಗಲಿದ್ದು, ಠಾಣೆಗಳೂ ಸೀಲ್‌ಡೌನ್ ಆಗಿವೆ. ಹೀಗಾಗಿ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಎದುರಾಗಿದ್ದು, ಚೆಕ್ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕಂಡುಬರುತ್ತಿಲ್ಲ. ಇದರ ದುರ್ಲಾಭ ಪಡೆದ ಕೆಲವರು ರಸ್ತೆಗಳಲ್ಲಿ ಜಾಲಿರೈಡ್ ಹೋಗುತ್ತಿರುವುದು ಕಂಡುಬರುತ್ತಿದೆ.
ಮಾಂಸದ ಅಂಗಡಿಗಳ ಮುಂದೆ ಜಮಾವಣೆ: ಮಾಂಸ ಹಾಗೂ ಕೋಳಿ ಮಾರಾಟ ಅಂಗಡಿಗಳ ಮುಂದೆ ದೊಡ್ಢಮಟ್ಟದಲ್ಲಿ ಜನ ಜಮಾವಣೆಗೊಳ್ಳುತ್ತಿದ್ದಾರೆ. ಪರಸ್ಪರ ಅಂತರ ಮರೆತಿದ್ದಾರೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಕರೊನಾ ಬಗ್ಗೆ ಆತಂಕವಿಲ್ಲದೆ ಜನ ಸ್ವಚ್ಛಂದವಾಗಿ ತಿರುಗಾಡುತ್ತಿರುವುದು ವಾರಾಂತ್ಯದ ಲಾಕ್‌ಡೌನ್ ಉದ್ದೇಶವನ್ನು ಬುಡಮೇಲು ಮಾಡುತ್ತಿದೆ.
ದಂಡ ಪ್ರಯೋಗಕ್ಕೆ ತಾತ್ಕಾಲಿಕ ಬ್ರೇಕ್: ಪರಸ್ಪರ ಅಂತರ ಕಾಯ್ದುಕೊಳ್ಳದಿರುವುದು, ಮಾಸ್ಕ್ ಧರಿಸದಿರುವುದು, ಅನಗತ್ಯವಾಗಿ ರಸ್ತೆಗಿಳಿಯುವವರ ವಿರುದ್ಧ ಜಿಲ್ಲಾಡಳಿತ ಪ್ರಯೋಗಿಸುತ್ತಿರುವ ದಂಡಾಸ್ತ್ರಕ್ಕೆ ವಾರಾಂತ್ಯದ ಲಾಕ್‌ಡೌನ್‌ನಲ್ಲಿ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಇದರಿಂದ ಸಾರ್ವಜನಿಕ ಓಡಾಟಕ್ಕೆ ಯಾವ ಅಡೆತಡೆ ಇಲ್ಲದಂತಾಗಿದೆ.