

ತುಮಕೂರು: ಜಿಲ್ಲೆಯ ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ಬಳಕೆ ಮಾಡುವಲ್ಲಿ ಪ್ರವಾಸೋದ್ಯಮ ಇಲಾಖೆ ಹಿಂದೆ ಬಿದ್ದಿದೆ.
ಅನುದಾನ ಸದ್ಬಳಕೆಯಲ್ಲಿ ನಿರಾಸಕ್ತಿ ತೋರಿರುವ ಅಧಿಕಾರಿಗಳಿಂದ ಕೆಲಸ ಮಾಡಿಸಬೇಕಾದ ಜನಪ್ರತಿನಿಧಿಗಳೂ ಕರ್ತವ್ಯ ಮರೆತಿರುವುದು ಪ್ರವಾಸಿ ತಾಣಗಳು ಆಕರ್ಷಣೆ ಕಳೆದುಕೊಳ್ಳುವಂತಾಗಿದೆ. ಕಳೆದ ವರ್ಷ ಇಲಾಖೆ ವತಿಯಿಂದ ಬಂಡವಾಳ ವೆಚ್ಚ ಹಾಗೂ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ಅನುಷ್ಠಾನಗೊಂಡಿರುವ ಕಾಮಗಾರಿಗಳ ಪ್ರಗತಿ ಶೇ.10ಕ್ಕಿಂತ ಕಡಿಮೆ ಇದೆ. ಕಳೆದ ವರ್ಷ ಮಂಜೂರಾಗಿರುವ 86 ಕಾಮಗಾರಿಗಳ ಪೈಕಿ ಈವರೆಗೆ ಪೂರ್ಣಗೊಂಡಿರುವ ಕಾಮಗಾರಿ ಕೇವಲ 5 ಮಾತ್ರ. 41 ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ಪಡೆದಿರುವುದಷ್ಟೇ ಪ್ರವಾಸೋದ್ಯಮ ಇಲಾಖೆ ಸಾಧನೆ.
ಇನ್ನು ಬರೋಬ್ಬರಿ 40 ಕಾವಗಾರಿ ಆರಂಭಿಸಲು ಸಮಯವೇ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಹಣ ಬಳಸಲು ತಡಕಾಡುತ್ತಿರುವಾಗಲೇ ಮಂಜೂರಾಗಿದ್ದ ಕೋಟಿಗಟ್ಟಲೆ ಅನುದಾನ ವಾಪಸ್ ಪಡೆಯಲು ಸರ್ಕಾರ ಚಿಂತಿಸಿದ್ದು, ಜಿಲ್ಲೆಯ ಜನರಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ದೊಡ್ಡ ನಷ್ಟತಂದಿದೆ.
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ವಾಸ್ತವ್ಯಕ್ಕಾಗಿ ಯಾತ್ರಿ ನಿವಾಸ, ತಾಣಗಳಿಗೆ ತಲುಪಲು ಕೂಡುರಸ್ತೆ, ಕಾಂಪೌಂಡ್ ಸೇರಿ ವಿವಿಧ ಕಾಮಗಾರಿಗಳಿಗೆ ಸರ್ಕಾರ ಹಣ ನೀಡಿದ್ದರೂ ಅದನ್ನು ಬಳಸಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿಯೇ ಜಿಲ್ಲಾ ಪ್ರವಾಸೋದ್ಯಮ ಸಮಿತಿಗೆ ಸ್ವತಃ ಜಿಲ್ಲಾಧಿಕಾರಿಯೇ ಮುಖ್ಯಸ್ಥರಾಗಿದ್ದರೂ ಪ್ರಯೋಜನವೇ ಇಲ್ಲದಂತಾಗಿದೆ.
ಸರ್ಕಾರದ ಏಜೆನ್ಸಿಗಳೇ ಕಾರಣ: ಸಿವಿಲ್ ಕಾಮಗಾರಿಗಳನ್ನು ಸರ್ಕಾರದ ಏಜೆನ್ಸಿಗಳಾದ ಕೆಆರ್‌ಐಡಿಎಲ್, ನಿರ್ಮಿತಿ ಕೇಂದ್ರ, ಪಿಡಬ್ಲ್ಯೂಡಿ ಹಾಗೂ ಟೂಡಾ ವಹಿಸಿಕೊಂಡಿವೆ. ಜತೆಗೆ ಮುಂಗಡವಾಗಿಯೇ ಹಣ ಪಡೆದರೂ ಕಾಮಗಾರಿ ಆರಂಭಿಸಲು ಮುಂದಾಗಿಲ್ಲ. ಸಾಮರ್ಥ್ಯಕ್ಕೆ ಮೀರಿದ ಕೆಲಸಗಳನ್ನು ಪಡೆಯುವ ಸರ್ಕಾರಿ ಏಜೆನ್ಸಿಗಳು ಸಕಾಲದಲ್ಲಿ ಪೂರ್ಣಗೊಳಿಸದೆ ಜಿಲ್ಲೆಯಲ್ಲಿ ಸಾಕಷ್ಟು ಹಣ ಪೋಲಾಗುವಂತೆ ಮಾಡಿವೆ. 86 ಕಾಮಗಾರಿಗಳ ಪೈಕಿ ಈವರೆಗೂ ಪೂರ್ಣವಾಗಿರುವುದು ಕೇವಲ 5, ತುಮಕೂರು, ಮಧುಗಿರಿ, ಗುಬ್ಬಿ, ಶಿರಾ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತಲಾ ಒಂದು ಕ್ಷೇತ್ರಗಳಲ್ಲಿ ಮಾತ್ರ ಹಣ ಬಳಕೆಯಾಗಿದೆ.
ಯಾವ ಸಂಸ್ಥೆ ಎಷ್ಟು ಕೆಲಸ ಆರಂಭಿಸಿಲ್ಲ!: ಜಿಲ್ಲೆಯಲ್ಲಿ ಕಾಮಗಾರಿ ಆರಂಭವಾಗದ 40 ಕಾಮಗಾರಿಗಳ ಪೈಕಿ ಸರ್ಕಾರಿ ಸ್ವಾಮ್ಯದ ಕೆಆರ್‌ಐಡಿಎಲ್ ಸಂಸ್ಥೆಯೇ ಬರೋಬ್ಬರಿ 30 ಕಾಮಗಾರಿ ಆರಂಭಿಸಬೇಕಿದೆ. ಉಳಿದಂತೆ ನಿರ್ಮಿತಿ ಕೇಂದ್ರ 5, ಲೋಕೋಪಯೋಗಿ ಇಲಾಖೆ 3, ಟೂಡಾ ಹಾಗೂ ರಾಜ್ಯ ಪುರಾತತ್ವ ಇಲಾಖೆ ತಲಾ ಒಂದು ಕಾಮಗಾರಿ ಆರಂಭಿಸಲು ಮೀನಮೇಷ ಎಣಿಸುತ್ತಿವೆ. ಸಾಕಷ್ಟು ಕಡೆಗಳಲ್ಲಿ ಜಮೀನು ಇಲ್ಲದಿದ್ದರೂ ಹಣ ನೀಡಿರುವುದು ಕಾಮಗಾರಿ ಆರಂಭಕ್ಕೆ ತೊಂದರೆಯಾಗಿದೆ ಎಂಬ ಸಮರ್ಥನೆ ಇಲಾಖೆ ಮುಖ್ಯಸ್ಥರ ಕಡೆಯಿಂದ ಇದೆಯಾದರೂ ಸರ್ಕಾರಿ ಇಲಾಖೆಗಳು ಸಮನ್ವತೆಯಿಂದ ಕೆಲಸ ಮಾಡಿದರೆ ಇದೊಂದು ಸಮಸ್ಯೆಯೇ ಅಲ್ಲ ಎಂಬುದು ಜನರ ಅಭಿಪ್ರಾಯ.
ಪ್ರವಾಸೋದ್ಯಮ ಕೇಂದ್ರಗಳ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಲಾಗಿದೆ. ಭೂಮಿಯ ಸಮಸ್ಯೆಯಿಂದ ಆರಂಭವಾಗದ 40 ಕಾಮಗಾರಿಗಳಿಗೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು. ಜಿಲ್ಲೆಗೆ ಬಿಡುಗಡೆಯಾಗಿರುವ ಅನುದಾನ ಸಂಪೂರ್ಣ ಬಳಸಿಕೊಳ್ಳಲಾಗುವುದು. ಬಿ.ಕೆ.ಸೋಮಶೇಖರ್ ಡಿಡಿ, ಪ್ರವಾಸೋದ್ಯಮ ಇಲಾಖೆ ಸರ್ಕಾರ ಹಣ ನೀಡಿದರೂ ಸಕಾಲದಲ್ಲಿ ಖರ್ಚು ಮಾಡಲು ವಿಫಲರಾಗಿರುವ ಅಧಿಕಾರಿಗಳಿಂದ ನಷ್ಟ ವಸೂಲಿ ಮಾಡಬೇಕು. ಸಾಮರ್ಥ್ಯವಿಲ್ಲದಿದ್ದರೂ ಗುತ್ತಿಗೆ ಪಡೆದು ವಂಚಿಸುವ ಸರ್ಕಾರಿ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಪ್ರವಾಸೋದ್ಯಮ ತಾಣಗಳು ಅಭಿವೃದ್ಧಿಯಾಗಿದ್ದರೆ ಉದ್ಯೋಗ ಹಾಗೂ ಪ್ರತ್ಯಕ್ಷ, ಪರೋಕ್ಷ ಆರ್ಥಿಕ ಚಟುವಟಿಕೆ ಸಾಧ್ಯವಿರುತ್ತಿತ್ತು. ಟಿ.ಕೆ.ನಾರಾಯಣಸ್ವಾಮಿ ಮಧುಗಿರಿ