ರೈಲು ನಿಲ್ದಾಣ ಅಭಿವೃದ್ಧಿ ನಿರ್ಲಕ್ಷ್ಯ

rail
ಮೂಡ್ಲಕಟ್ಟೆಯ ರೈಲು ನಿಲ್ದಾಣ
Published on

ರಾಘವೇಂದ್ರ ಪೈ ಗಂಗೊಳ್ಳಿ, ಕುಂದಾಪುರ

ಉಡುಪಿ ರೈಲು ನಿಲ್ದಾಣ ಬಿಟ್ಟರೆ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣವಾದ ಕುಂದಾಪುರದ ಮೂಡ್ಲಕಟ್ಟೆ ರೈಲು ನಿಲ್ದಾಣ 10 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಣದೇ, ನಿರ್ಲಕ್ಷೃ ವಹಿಸಲಾಗಿದ್ದು, ಎರಡು ದಶಕಗಳಿಂದ ಮೇಲ್ದರ್ಜೆ ಬೇಡಿಕೆಯಿದ್ದರೂ ಅದಕ್ಕೆ ಈವರೆಗೆ ಮನ್ನಣೆಯೇ ಸಿಕ್ಕಿಲ್ಲ.
ಪ್ರತಿದಿನ ಎರಡು ಲಕ್ಷ ರೂ.ಗೂ ಹೆಚ್ಚು ಆದಾಯವಿರುವ ಕೊಲ್ಲೂರು ದೇಗುಲ ಸಹಿತ ಉಡುಪಿ ಜಿಲ್ಲೆಯ ಹಲವು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೂ ಈ ನಿಲ್ದಾಣ ಹತ್ತಿರವಿದೆ. 10 ವರ್ಷಗಳಲ್ಲಿ ಕಾರವಾರ ವಿಭಾಗೀಯ ಮಟ್ಟದಲ್ಲಿ ನಡೆದ ಅಭಿವೃದ್ಧಿಬಿಟ್ಟರೆ, ಕೊಂಕಣ ನಿಗಮದ ಕೇಂದ್ರ ಕಚೇರಿ ಬಜೆಟ್ ಮೂಲದಿಂದ ಯಾವುದೇ ಅಭಿವೃದ್ಧಿಯಾಗಿಲ್ಲ.

ಅವೈಜ್ಞಾನಿಕ ನೆಲಹಾಸು

1992ರ ಆಸುಪಾಸಿನಲ್ಲಿ ನಿರ್ಮಾಣಗೊಂಡ ಈ ನಿಲ್ದಾಣದ ನೆಲಹಾಸು ಅವೈಜ್ಞಾನಿಕವಾಗಿದ್ದು, ಒಂದೆಡೆ ಎತ್ತರ, ಇನ್ನೊಂದೆಡೆ ತಗ್ಗು ಇದ್ದು, ಇಲ್ಲಿ ವೀಲ್‌ಚೇರ್, ಗೂಡ್ಸ್ ಪೊರ್ಟರ್ ಸಂಚರಿಸುವುದು ಕಷ್ಟ. ಮಾರ್ಬಲ್ ನೆಲಹಾಸು ಅಳವಡಿಕೆಯಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೈಲು ಬರುವ ಗಡಿಬಿಡಿಯಲ್ಲಿ ಓಡಿ ಹೋಗಿ ರೈಲು ಹತ್ತುವುದು ಅಪಾಯಕಾರಿ. ಮಳೆಗಾಲದಲ್ಲಂತೂ ಅಲ್ಲಲ್ಲಿ ನೆಲದ ಮೇಲೆ ನೀರು ನಿಲ್ಲುತ್ತಿದೆ. ವಿಶ್ರಾಂತಿ ಕೊಠಡಿಯಲ್ಲಿ ಶೌಚಗೃಹ ಬಿಟ್ಟರೆ, ಬರುವಂತಹ ಪ್ರಯಾಣಿಕರಿಗೆ ಇಲ್ಲಿ ಬೇರೆ ಯಾವುದೇ ಶೌಚಗೃಹ ವ್ಯವಸ್ಥೆಯೇ ಇಲ್ಲ.

ಮೇಲ್ಛಾವಣಿ ಅಗತ್ಯ

ಜೋರು ಮಳೆ ಬಂದರೆ ನಿಲ್ದಾಣದೊಳಗೆ ನೀರು ಜೋರಾಗಿ ರಾಚುತ್ತಿದೆ. ಹಳಿ ದಾಟಲು ಇರುವ ಮೇಲ್ಸೇತುವೆಗೆ ಮೇಲಿನಿಂದ ಛಾವಣಿಯೇ ಇಲ್ಲ. ಮಳೆ ಬಂದರೆ ಮೇಲ್ಸೇತುವೆಯಲ್ಲಿ ನಡೆದುಕೊಂಡು ಹೋಗಲು ಸಾಧ್ಯವಿಲ್ಲ. ಕುಂದಾಪುರ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವುದರಿಂದ ಎರಡೂ ಪ್ಲಾೃಟ್‌ಫಾರಂಗಳಲ್ಲಿ ಸಂಪೂರ್ಣ ಮುಚ್ಚುವ ಮೇಲ್ಛಾವಣಿ ಅಗತ್ಯವಿದೆ. ಬೇಸಿಗೆಯಲ್ಲಿ ಸರಿಯಾದ ನೀರಿನ ಪೂರೈಕೆಯಿಲ್ಲ. ಸಂಪರ್ಕ ರಸ್ತೆಗೆ ಬೆಳಕಿನ ವ್ಯವಸ್ಥೆ ಬೇಕಿದೆ.

ಯೋಜನೆ ಅನುಷ್ಠಾನಕ್ಕೆ ಸಿದ್ಧತೆ

ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸತತ ಹೋರಾಟದ ಫಲವಾಗಿ ಪಂಚಗಂಗಾ ರೈಲು, ಮೈಸೂರು ರೈಲು, ವಿಶೇಷ ರೈಲುಗಳ ಆರಂಭವಾಗಿದೆ. ಇವುಗಳ ಜತೆಗೆ ದಾನಿಗಳ ಮೂಲಕ ನಿಲ್ದಾಣಕ್ಕೆ ಟಿಕೆಟ್ ಬುಕ್ಕಿಂಗ್, ಬೆಳಕು, ಶೆಲ್ಟರ್, ಡಿಜಿಟಲ್ ಮಾಹಿತಿ ಟಿವಿ, ಸೆಲ್ಫಿ ಪಾಯಂಟ್ ಇತ್ಯಾದಿ ಸೌಲಭ್ಯ ಸಿಕ್ಕಿವೆ. ಈಗ ಹಂಗಳೂರು ಲಯನ್ಸ್ ಕ್ಲಬ್‌ನವರು ನೆಲಹಾಸು, ಮೇಲ್ಛಾವಣಿ ಅಳವಡಿಕೆಗೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದ್ದಾರೆ.

ಪ್ರವಾಸಿ ತಾಣ

ಆದಾಯಾನುಸಾರ ಉಡುಪಿ ಬಳಿಕ ಕುಂದಾಪುರ ನಿಲ್ದಾಣ ನಿಲುಗಡೆಯಾಗಲು ಬೇಕಾದ ಆದಾಯ ಹೊಂದಿದೆ. ಪ್ರಮುಖ ಪ್ರವಾಸಿ ಹಾಗೂ ಭೌಗೋಳಿಕ ಪ್ರಾಮುಖ್ಯತೆ ತಾಣ ಹೊಂದಿವೆ. ಹೆಚ್ಚು ರೈಲುಗಳ ನಿಲುಗಡೆಗೆ ಇದಿಷ್ಟು ಸಾಕು. ಆದರೆ ಇಲ್ಲಿ ಅಭಿವೃದ್ಧಿಯೂ ಆಗುತ್ತಿಲ್ಲ, ರೈಲುಗಳ ನಿಲುಗಡೆಯೂ ಹೆಚ್ಚುತ್ತಿಲ್ಲ. ಈಗಲಾದರೂ ಕೊಂಕಣ್ ರೈಲ್ವೆ ನಿಗಮದ ವಿಶೇಷ ಅನುದಾನ ಹಾಗೂ ಅಮೃತ್ ಭಾರತ್ ಯೋಜನೆಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಮಿತಿ ಗೌತಮ್ ಶೆಟ್ಟರು ಒತ್ತಾಯಿಸಿದ್ದಾರೆ.

ರೈಲುಗಳ ನಿಲುಗಡೆ ಬೇಡಿಕೆ

ಪಂಚಗಂಗಾ ರೈಲು, ಮತ್ಸೃಗಂಧ, ಮುಂಬೈ- ಮಂಗಳೂರು ಎಕ್ಸ್‌ಪ್ರೆಸ್, ಮಂಗಳಾ, ನೇತ್ರಾವತಿ ರೈಲು, ಎರಡು ಪ್ಯಾಸೆಂಜರ್ ರೈಲು, ಮುರ್ಡೇಶ್ವರ- ಮೈಸೂರು ರೈಲು ನಿತ್ಯ ನಿಲುಗಡೆ ಇವೆ. ವಾರಕ್ಕೊಂದು ರೈಲಿನಂತೆ ವಾರದಲ್ಲಿ 7-8 ರೈಲುಗಳು ಸಂಚರಿಸುತ್ತವೆ. ಈ ನಿಲ್ದಾಣವಾಗಿ 30 ವರ್ಷವಾದರೂ ಇಂದಿಗೂ ಕೆಲ ಪ್ರಮುಖ ರೈಲುಗಳ ನಿಲುಗಡೆಗೆ ಅವಕಾಶವೇ ಕೊಡುತ್ತಿಲ್ಲ. ಎರ್ನಾಕುಲಂ- ಮುಂಬೈ ವಂದೇ ಭಾರತ್ ರೈಲು ನಿಲುಗಡೆ, ಅಮೃತ್‌ಸರ- ಕೊಚ್ಚುವೇಲಿ, ಡೆಹ್ರಾಡೂನ್- ಕೊಚ್ಚುವೇಲಿ, ಪೋರ್‌ಬಂದರ್- ಕೊಚ್ಚುವೇಲಿ ರೈಲುಗಳು, ದಿಲ್ಲಿ, ಕೇರಳ ರೈಲುಗಳ ನಿಲುಗಡೆ ಸಿಗಬೇಕಿದೆ. ಬೆಂಗಳೂರಿಗೆ ಹೊಸದಾಗಿ ಇನ್ನೊಂದು ರೈಲಿನ ಅಗತ್ಯವಿದ್ದರೆ, ತಿರುಪತಿ, ಅಯೋಧ್ಯೆಗೆ ಹೊಸ ರೈಲು ಬೇಡಿಕೆಯಿದೆ.

ಕುಂದಾಪುರ ನಿಲ್ದಾಣದ ಅಭಿವೃದ್ಧಿಗೆ ಕೊಂಕಣ್ ರೈಲ್ವೆ ನಿರ್ಲಕ್ಷೃ ವಹಿಸಿದೆ. 10 ವರ್ಷಗಳಿಗೂ ಹೆಚ್ಚು ಕಾಲದಿಂದ ಮೇಲ್ದರ್ಜೆ ಬೇಡಿಕೆಯಿದೆ. ಈ ಬಗ್ಗೆ ಸಂಸದರ ಗಮನಕ್ಕೆ ತರಲಾಗಿದ್ದು, ಅವರು ಸಹ ಆಸಕ್ತಿ ವಹಿಸಿದ್ದಾರೆ. ನಿಲ್ದಾಣದ ಮೇಲ್ದರ್ಜೆಯೊಂದಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸುವುದು ಬಹಳ ಅಗತ್ಯ.-ಗಣೇಶ್ ಪುತ್ರನ್ ಅಧ್ಯಕ್ಷ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ https://www.vijayavani.net/achladi-co-operative-sangh-mahasabhe

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net