ಮೊಗೇರ ಕುಟುಂಬಗಳ ಕಡೆಗಣನೆ: ಚುನಾವಣೆ ಬಹಿಷ್ಕಾರದ ಚಿಂತನೆ

15adarshkdga2
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ತೋಟದ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಮೊಗೇರ ಸಮಾಜದ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಸ್ವಂತ ಸೂರು ನೀಡದೆ ಸರ್ಕಾರ ವಂಚಿಸುತ್ತಿದೆ ಎಂದು ಮುದ್ದ ಕಳಲ ಯುವಕ ಸಂಘ ಅಧ್ಯಕ್ಷ ಜ್ಯೋತಿ ಕುಮಾರ್ ಆರೋಪಿಸಿದರು.


ಬೆಟ್ಟಗೇರಿಯಲ್ಲಿ ಆಯೋಜಿಸಿದ್ದ ಸಂಘದ ಸಭೆಯಲ್ಲಿ ನಿವೇಶನ ರಹಿತ ಮೊಗೇರ ಸಮಾಜದ ಪರಿಶಿಷ್ಟ ಕುಟುಂಬಗಳು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಚರ್ಚೆ ನಡೆಸಿ ಮಾತನಾಡಿದರು.


ಕಳೆದ ೪೦- ೫೦ ವರ್ಷಗಳಿಂದ ಬೆಟ್ಟಗೇರಿ ಗ್ರಾ.ಪಂ ವ್ಯಾಪ್ತಿಯ ಮೊಗೇರ ಕುಟುಂಬಗಳು ತೋಟದ ಲೈನ್ ಮನೆಗಳಲ್ಲಿ ವಾಸಿಸುತ್ತಿವೆ. ಇವರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಈ ಹಿಂದೆ ಬೆಟ್ಟಗೇರಿ ಗ್ರಾ.ಪಂ ವ್ಯಾಪ್ತಿಗೆ ಬರುವ ಪೈಸಾರಿ ಜಾಗವನ್ನು ಗುರುತಿಸಿ ಸರ್ವೆ ನಂಬರ್ ಸಹಿತ ಜಿಲ್ಲಾಧಿಕಾರಿ ಹಾಗೂ ಬೆಟ್ಟಗೇರಿ ಗ್ರಾ.ಪಂ ಗೆ ಮನವಿ ನೀಡಲಾಗಿತ್ತು. ಆದರೆ ಇಲ್ಲಿಯವರೆಗೆ ಪಂಚಾಯಿತಿ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡಿಲ್ಲ. ಈ ಕಾರಣದಿಂದ ಪರಿಶಿಷ್ಟ ಜಾತಿ ಮೊಗೇರ ಜನಾಂಗದ ನಿವೇಶನ ರಹಿತರು ನಿವೇಶನದ ಬೇಡಿಕೆ ಮುಂದಿಟ್ಟು ಬೆಟ್ಟಗೇರಿ ಗ್ರಾ.ಪಂ ಮುಂಭಾಗ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುವುದು ಖಚಿತ ಮತ್ತು ನಿವೇಶನ ಸಿಗದೇ ಇದ್ದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ತಿಳಿಸಿದರು.


ಈ ಎಲ್ಲಾ ವಿಚಾರಗಳನ್ನು ಕಾರ್ಯ ರೂಪಕ್ಕೆ ತರಲು ಮತ್ತು ದಿನಾಂಕ ನಿಗದಿ ಪಡಿಸಲು ಡಿ೨೨ ರಂದು ಸಂಜೆ ಬೆಟ್ಟಗೇರಿಯಲ್ಲಿ ಮತ್ತೊಂದು ಸಭೆ ನಡೆಸುವುದಾಗಿ ಜ್ಯೋತಿ ಕುಮಾರ್ ತಿಳಿಸಿದರು.


ಸಭೆಯಲ್ಲಿ ಮುದ್ದ ಕಳಲ ಯುವಕ ಸಂಘದ ತಾಲೂಕು ಹಾಗೂ ಬೆಟ್ಟಗೇರಿ ಹೋಬಳಿ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net