ಹನೂರು : ಪಟ್ಟಣಕ್ಕೆ ಮೊಟ್ಟ ಮೊದಲ ಬಾರಿಗೆ ಆಗಮಿಸಿದ್ದ ನೂತನ ಸಂಸದ ಸುನಿಲ್ ಬೋಸ್ ಅವರು ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಕಡೆಗಣಿಸಿರುವುದು ಸರಿಯಿಲ್ಲ. ಮುಂದೆ ಈ ಬಗ್ಗೆ ಸರಿಪಡಿಸಿಕೊಳ್ಳದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಸವರಾಜು ಆಕ್ರೋಶ ಹೊರ ಹಾಕಿದ್ದಾರೆ.
ಪಟ್ಟಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಚಾಮರಾಜನಗರ ಲೋಕಸಭಾ ಚುನಾವಣೆಯ ಇತಿಹಾಸದಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಜಯಗಳಿಸಿರುವ ನೂತನ ಸಂಸದ ಸುನಿಲ್ ಬೋಸ್ ಬುಧವಾರ ಹನೂರಿನಲ್ಲಿ ಜನ ಸಂಪರ್ಕಸಭೆ ಆಯೋಜನೆ ಮಾಡಿದ್ದರು. ಆದರೆ ಈ ಸಭೆಗೆ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿರುವುದು ಎಷ್ಟರ ಮಟ್ಟಿಗೆ ಸರಿ? ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹನೂರು ಪಟ್ಟಣದ 2 ವಾರ್ಡ್‌ಗಳಲ್ಲಿ, ಯಾವ ರೀತಿ ಪ್ರಚಾರ ನಡೆಸಿ ಮತ ಹಾಕಿಸಿದ್ದೇವೆ ಎಂಬುದು ನಮಗೆ ಗೊತ್ತು, ಮಾಜಿ ಶಾಸಕ ಆರ್.ನರೇಂದ್ರ ಅವರ ಮಾರ್ಗದರ್ಶನದಲ್ಲಿ ಇದುವರೆಗೂ ಪ್ರಚಾರ ಕಾರ್ಯ ಮಾಡಿದ್ದೇವೆ. ನರೇಂದ್ರ ಅವರು ಎಲ್ಲ ಸಮಾಜದವರನ್ನೂ ಪರಿಗಣನೆಗೆ ತೆಗೆದುಕೊಂಡು ಪ್ರತಿಯೊಂದು ಕಾರ್ಯಕ್ರಮಕ್ಕೆ ಆಹ್ವಾನ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಮುಖಂಡರು ಎಲ್ಲವೂ ನಾವೇ, ನಮ್ಮದೇ ಎನ್ನುವ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ. ಚುನಾವಣಾ ವೇಳೆ ನಾಪತ್ತೆಯಾಗಿದ್ದ ಕೆಲವರು ಜಯಗಳಿಸಿದ ನಂತರ ಪ್ರತ್ಯಕ್ಷವಾಗಿದ್ದಾರೆ. ಇಂತಹ ಮುಖಂಡರನ್ನು ನೂತನ ಸಂಸದರು ದೂರವಿಡಬೇಕು. ಎಲ್ಲೋ ಕುಳಿತುಕೊಂಡು ಸಂಸದರು ಬಂದಾಗ ಮೆಚ್ಚಿಸಿಕೊಳ್ಳುವುದು ಸರಿಯಲ್ಲ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಪ್ರಸನ್ನ ಕುಮಾರ್ ಮಾತನಾಡಿ, ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಅದೇ ರೀತಿ ನೂತನ ಸಂಸದರು ಸಹ ನಿಷ್ಠಾವಂತ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳಬೇಕು. ಹನೂರು ತಾಲೂಕು ಕೇಂದ್ರಕ್ಕೆ ಆಗಮಿಸಿದಾಗ ಎಲ್ಲ ಮುಖಂಡರಿಗೂ ಮಾಹಿತಿ ನೀಡಬೇಕು. ಬೆರಳೆಣಿಕೆಯ ಮುಖಂಡರಿಗೆ ಮಾಹಿತಿ ನೀಡಿದರೆ ನಮಗೆ ನೋವುಂಟಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.